ದಾವಣಗೆರೆ: ಶೇ 40ರಷ್ಟು ಕಮಿಷನ್ ಬಗ್ಗೆ ಲೋಕಾಯುಕ್ತದಲ್ಲಿ ತನಿಖೆಯಾಗಬೇಕು ಎಂದರೆ ತನಿಖೆಯಾಗಲಿ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಸ್ವಪಕ್ಷದ ಸಚಿವರ ವಿರುದ್ಧ ತನಿಖೆಯಾಗಲಿ ಎಂದು ಆಗ್ರಹಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ಸರ್ಕಾರಿ ಬಸ್ ನಿಲ್ದಾಣ ಉದ್ಘಾಟನೆ ನಂತರ ಶೇ 40ರಷ್ಟು ಕಮಿಷನ್ ತನಿಖೆ ನಡೆಸುವಂತೆ ಸಿದ್ದರಾಮಯ್ಯ ಒತ್ತಾಯ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಚಸ್ಮಾವನ್ನು ಒರೆಸಿಕೊಂಡು ಸರಿಯಾಗಿ ನೋಡಲಿ, ಯಾರನ್ನು ಪಕ್ಕದಲ್ಲಿ ಇಟ್ಟುಕೊಂಡು ಪೇ ಸಿಎಂ ಎಂದು ಹೋರಾಟ ಮಾಡ್ತಾ ಇದಾರೆ ನೋಡಿಕೊಳ್ಳಲಿ. ಅವರ ಪಕ್ಷದ ಡಿಕೆಶಿ ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬೇಲ್ ಮೇಲೆ ಇರುವ ವ್ಯಕ್ತಿ, ರಾಹುಲ್ ಗಾಂಧಿ ಕೂಡ ಬೇಲ್ ಮೇಲೆ ಇರುವವರು ಎಂದು ಡಿಕೆಶಿ ಹಾಗೂ ರಾಹುಲ್ ಗಾಂಧಿಗೆ ಟಕ್ಕರ್ ನೀಡಿದರು.
ಅವರನ್ನು ಪಕ್ಕದಲ್ಲಿ ಇಟ್ಟುಕೊಂಡು ಪೇ ಸಿಎಂ ಅಭಿಮಾನ ಮಾಡ್ತಾ ಇದಾರೆ. ಅವರಂತೆ ನಾನು ಕರುಣಾಕರ್ ರೆಡ್ಡಿ, ಬೊಮ್ಮಾಯಿ ಅವರು ಜೈಲ್ ಗೆ ಹೋಗಿ ಬಂದಿಲ್ಲ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರವಾಗದೇ ಪಾರದರ್ಶನಕವಾಗಿ ಕೆಲಸ ಮಾಡುತ್ತಿದ್ದೇವೆ. ಲೋಕಾಯುಕ್ತದಲ್ಲಿ ತನಿಖೆಯಾಗಬೇಕು ಎಂದರೆ ತನಿಖೆಯಾಗಲಿ ಎಂದರು.
ಭಾರತ್ ಜೋಡೋ ಯಾತ್ರೆ ಬಗ್ಗೆ ಶ್ರೀರಾಮುಲು ವ್ಯಂಗ್ಯ: ಭಾರತ್ ಜೋಡೋ ಮೂಲಕ ಬೃಹತ್ ಸಮಾವೇಶ ಮಾಡಿ ಇತಿಹಾಸ ಸೃಷ್ಟಿ ಮಾಡಲು ರಾಹುಲ್ ಗಾಂಧಿ ಹೊರಟಿದ್ದಾರೆ. ಹೌದು, ರಾಹುಲ್ ಗಾಂಧಿ ಹೋದ ಕಡೆ ಇತಿಹಾಸವನ್ನೇ ಸೃಷ್ಟಿ ಮಾಡಿದ್ದಾರೆ. ಅವರು ಎಲ್ಲೆಲ್ಲಿ ಹೆಜ್ಜೆ ಇಟ್ಟಿದ್ದಾರೋ ಅಲ್ಲೆಲ್ಲ ಇತಿಹಾಸ ಸೃಷ್ಟಿ ಆಗಿದೆ. ಅವರು ಕಾಲು ಇಟ್ಟ ಕಡೆ ಕಾಂಗ್ರೆಸ್ ಪಕ್ಷ ಮಾಯವಾಗುತ್ತಿದೆ. ಇದು ಅವರು ಸೃಷ್ಟಿ ಮಾಡ್ತಾ ಇರೋ ಇತಿಹಾಸ ಎಂದು ವ್ಯಂಗ್ಯವಾಡಿದರು.
ಈಗ ಪಾದಯಾತ್ರೆ ಮಾಡುತ್ತಿರುವ ತಮಿಳುನಾಡು, ಕೇರಳ ಕಡೆಗಳಲ್ಲಿ ಕಾಂಗ್ರೆಸ್ ಮಟಾಷ್ ಆಗುತ್ತಾ ಬಂದಿದೆ. ಭವಿಷ್ಯ ಬಳ್ಳಾರಿ ಜಿಲ್ಲೆಗಳಲ್ಲಿ ಕೂಡ ಕಾಂಗ್ರೆಸ್ ಅದೇ ಪರಿಸ್ಥಿತಿ ಬರುತ್ತೆ. ಈಗ ಭಾರತ್ ಜೋಡೋ ಯಾತ್ರೆ ಮಾಡ್ತಾ ಇದಾರೆ. ಭಾರತದ ಯಾವ ಬಾಗ ತೆಗೆದು ಯಾವ ಭಾಗಕ್ಕೆ ಜೋಡಿಸುತ್ತಿರೋ ಗೊತ್ತಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಕರ್ನಾಟದಲ್ಲಿ ಕೂಡ ಅಧಿಕಾರಕ್ಕೆ ಬರುತ್ತೆ. ಈ ಅವಳಿ ಜಿಲ್ಲೆಗಳಲ್ಲಿ ಹತ್ತಕ್ಕೆ ಹತ್ತು ಕ್ಷೇತ್ರ ಬಿಜೆಪಿ ಗೆಲ್ಲುತ್ತೇವೆ ಎಂದರು.
ಓದಿ: ಎಸ್ಡಿಪಿಐ PFI ಎರಡೂ ದೇಶದ್ರೋಹಿ ಸಂಘಟನೆಗಳು: ಪ್ರಮೋದ್ ಮುತಾಲಿಕ್