ದಾವಣಗೆರೆ: ರಾಜ್ಯದ ಹಲವೆಡೆ ಟೊಮೆಟೊ ಬೆಲೆಯಲ್ಲಿ ಏಕಾಏಕಿ ಏರಿಕೆ ಕಂಡಿದೆ. ಪ್ರತಿ ಕೆಜಿಗೆ 20 ರಿಂದ 30 ರೂಪಾಯಿಗೆ ದೊರೆಯುತ್ತಿದ್ದ ಟೊಮೆಟೊ ಇಂದು 100 ರೂಪಾಯಿಗೆ ಏರಿಕೆ ಕಂಡಿದೆ. ಜಿಲ್ಲೆಯಲ್ಲೂ ಟೊಮಟೊ ದರ ಗಗನಕ್ಕೇರಿದ್ದು ಗ್ರಾಹಕರು ಟೊಮೆಟೊ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ತರಕಾರಿ ಬೆಲೆ ಹೆಚ್ಚಳವಾಗಿರುವುದು ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದೆ. ಆಹಾರ ಧಾನ್ಯಗಳ ಬೆಲೆ ಹೆಚ್ಚಳವಾಗಿರುವ ಬೆನ್ನಲ್ಲೇ ತರಕಾರಿ ದರ ಹೆಚ್ಚಳವಾಗಿರುವುದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಗಗನಕ್ಕೇರಿದ ಟೊಮೆಟೊ ಬೆಲೆ : ಸರಿಯಾದ ಸಮಯಕ್ಕೆ ಮಳೆ ಬಾರದ ಹಿನ್ನೆಲೆ ಟೊಮೆಟೊ ದರ ಹೆಚ್ಚಾಗಿದೆ. ಇದಲ್ಲದೆ ದಾವಣಗೆರೆಗೆ ಅಕ್ಕಪಕ್ಕ ತಾಲೂಕು, ಜಿಲ್ಲೆಗಳಿಂದ ಸರಿಯಾಗಿ ಟೊಮೆಟೊ ಪೂರೈಕೆಯಾಗದ ಕಾರಣ ಬೆಲೆ ಹೆಚ್ಚಳ ಉಂಟಾಗಿದೆ ಎಂದು ಹೇಳಲಾಗಿದೆ. ಜಿಲ್ಲೆಯಲ್ಲಿ ಬೆಳೆದ ಟೊಮೆಟೊ ಅಕ್ಕಪಕ್ಕದ ರಾಜ್ಯಗಳಿಗೆ ಹೋಗುತ್ತಿರುವುದರಿಂದಲೂ ಇಲ್ಲಿ ಸರಿಯಾದ ಪೂರೈಕೆ ಇಲ್ಲದೆ ಬೆಲೆ ಏರಿಕೆ ಉಂಟಾಗಿದೆ ಎಂದು ತರಕಾರಿ ಮಾರಾಟಗಾರರು ಹೇಳುತ್ತಾರೆ. ಟೊಮೆಟೊ ಬೆಲೆ ಚಿಲ್ಲರೆ ವ್ಯಾಪಾರಿಗಳಲ್ಲಿ 80 ರಿಂದ 90 ರೂಪಾಯಿ ಇದ್ದು, ಸಗಟು ವ್ಯಾಪಾರಿಗಳು 60 ರಿಂದ 70 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ.
ವಿವಿಧ ತರಕಾರಿಗಳ ಬೆಲೆಯನ್ನು ನೋಡುವುದಾದರೆ, ಬೀನ್ಸ್ ಪ್ರತಿ ಕೆಜಿಗೆ 120 ರಿಂದ 150 ರೂ., ಟೊಮ್ಯಾಟೊ ಬೆಲೆ 70ರಿಂದ 80 ರೂ., ಮೆಣಸಿನಕಾಯಿ 120 ರೂ, ಹೀರೆಕಾಯಿ, ಜವಳಿಕಾಯಿ, ಬೆಂಡೆಕಾಯಿ ತಲಾ 60 ರೂ, ಬದನೆಕಾಯಿ 40 ರೂ, ಕ್ಯಾರೆಟ್ 80 ರೂಪಾಯಿಗೆ ಮಾರಾಟವಾಗುತ್ತಿದೆ. ಪ್ರತಿ ಕೆಜಿಗೆ 20 ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೆಟೊ, ಇದೀಗ ಏಕಾಏಕಿ 70 ರಿಂದ 80 ರೂಪಾಯಿಗೆ ಏರಿಕೆಯಾಗಿದೆ. ಇದರಿಂದ ತರಕಾರಿ ಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಸಾಮಾನ್ಯವಾಗಿ ಬೆಳಗಾವಿ, ತಮಿಳುನಾಡಿನ ಊಟಿಯಿಂದ ದಾವಣಗೆರೆಗೆ ತರಕಾರಿ ಆಗಮಿಸುತ್ತದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ತರಕಾರಿ ಮಾರಾಟಗಾರ ರಮೇಶ್ ನಾಯ್ಕ್, ಮಳೆ ಇಲ್ಲದೆ ತರಕಾರಿ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ಬದುಕುವುದು ಕಷ್ಟಕರವಾಗಿದೆ. ಟೊಮೆಟೊ ಸೇರಿದಂತೆ ಹಲವು ತರಕಾರಿಗಳ ಬೆಲೆ ಹೆಚ್ಚಳವಾಗಿದೆ. ಜನರೂ ಕೂಡ ತರಕಾರಿ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಟೊಮೆಟೋ 70 ರಿಂದ 80 ರೂಪಾಯಿ ಇದೆ. ಬೀನ್ಸ್ 150 ರೂಪಾಯಿ, ಮೆಣಸಿನಕಾಯಿ 120 ರೂಪಾಯಿ ಇದೆ. ಇದರಿಂದಾಗಿ ಗ್ರಾಹಕರು ಕಡಿಮೆಯಾಗಿದ್ದಾರೆ. ನಾವು ತಂದ ತರಕಾರಿ ಕಡಿಮೆ ಮಾರಾಟವಾಗುತ್ತಿದೆ. ಇದರಿಂದ ನಮಗೂ ನಷ್ಟು ಉಂಟಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಪ್ರತಿಕ್ರಿಯಿಸಿದ ಗ್ರಾಹಕ ವೆಂಕಟೇಶ್, ಎಲ್ಲ ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ. ಯಾವ ತರಕಾರಿ ತೆಗೆದುಕೊಂಡರೂ ನೂರು ರೂಪಾಯಿ ದಾಟಿದೆ. ಹೀಗೆ ಆದರೆ ನಾವು ಹೇಗೆ ಜೀವನ ಮಾಡುವುದು. 20 ರಿಂದ 30 ರೂಪಾಯಿ ಇದ್ದ ಟೊಮೆಟೋ ದರ ಇಂದು 80 ರಿಂದ 90 ರೂಪಾಯಿ ಆಗಿದೆ. ಯಾವ ತರಕಾರಿಯ ಬೆಲೆಯನ್ನು ಕೇಳುವಂತಿಲ್ಲ ಅಷ್ಟು ಏರಿಕೆ ಕಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ : Tomato: ಕೆಜಿಗೆ 20 ರೂಪಾಯಿಯಿಂದ ₹100ಕ್ಕೆ ಜಿಗಿದ ಟೊಮೆಟೊ ಬೆಲೆ! ಕಾರಣವೇನು ಗೊತ್ತೇ?