ದಾವಣಗೆರೆ: ಮುಸ್ಲಿಂ ಸಮುದಾಯದ ಮಹಿಳೆಯರು ಬಟ್ಟೆ ಖರೀದಿಸಿ ಬರುವಾಗ ಅಡ್ಡಗಟ್ಟಿ ಧಮ್ಕಿ ಹಾಕಿದವರು ದೇಶದ್ರೋಹಿಗಳು. ಇಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ದಾವಣಗೆರೆ, ಹರಿಹರ ಅವಳಿ ನಗರದಲ್ಲಿ ಕೆಲ ಕಿಡಿಗೇಡಿಗಳು ಬಟ್ಟೆ ಖರೀದಿಸಿದಂತೆ ಮುಸ್ಲಿಂ ಮಹಿಳೆಯರಿಗೆ ಅಡ್ಡಗಟ್ಟಿ, ಬ್ಯಾಗ್ ಕಿತ್ತೆಸೆದಿದ್ದಾರೆ. ಇದು ಸರಿಯಲ್ಲ, ಇಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಎಸ್ಪಿಗೆ ಸೂಚನೆ ನೀಡುವುದಾಗಿ ಹೇಳಿದರು.
ಮುಸ್ಲಿಂ ಮಹಿಳೆಯರ ಬಟ್ಟೆ, ಬ್ಯಾಗ್ಗಳನ್ನು ಕಿತ್ತು ಹಾಕಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ನಾವು ಇದನ್ನು ಟೀಕೆ ಮಾಡಿದರೆ ಕಾಂಗ್ರೆಸ್ನವರು ನಮ್ಮನ್ನು ಕೋಮುವಾದಿಗಳು ಅಂತಾರೆ. ಬಹುತೇಕ ಹಳ್ಳಿಗಳಲ್ಲಿ ಗುಜರಿ, ತರಕಾರಿ, ಹಣ್ಣಿನ ವ್ಯಾಪಾರ ಮಾಡೋದು ಮುಸ್ಲಿಂ ಸಮುದಾಯಕ್ಕೆ ಸೇರಿದವರು. ನಾವು ಅದಕ್ಕೆ ಅಡ್ಡಿಪಡಿಸಿದರೆ ಅವರ ಹೊಟ್ಟೆ ಮೇಲೆ ಹೊಡೆದಂತೆ ಆಗುತ್ತದೆ. ಅಂತಹ ಕೆಲಸವನ್ನು ನಾವು ಮಾಡೋದಿಲ್ಲ. ಅಲ್ಪಸಂಖ್ಯಾತ ಸಮಾಜದ ಮುಖಂಡರು ಕಿಡಿಗೇಡಿಗಳಿಗೆ ಬುದ್ಧಿ ಹೇಳಬೇಕು ಎಂದರು.