ದಾವಣಗೆರೆ: 2023ರಲ್ಲಿ ಬೆಣ್ಣೆನಗರಿ ದಾವಣಗೆರೆ ಸೇರಿದಂತೆ ಜಿಲ್ಲೆಯು ಹಲವು ಸಿಹಿ ಕಹಿ ಘಟನೆಗಳಿಗೆ ಸಾಕ್ಷಿಯಾಗಿದೆ. ರಾಜಕೀಯ, ಧಾರ್ಮಿಕ ಮತ್ತು ಅಪರಾಧ ಸೇರಿದಂತೆ ಅನೇಕ ಪ್ರಮುಖ ಘಟನಾವಳಿಗಳು ಇಲ್ಲಿ ಜರುಗಿವೆ.
ಮಳೆಗಾಗಿ ಕಂಬಳಿ ಹಾಸಿ ಪೂಜೆ: ಮಳೆ ಅಭಾವ ಹಿನ್ನೆಲೆ ವಿಶೇಷ ಪೂಜೆ ಸಲ್ಲಿಸಿದ್ದ ರೈತರು ಮೋಡದತ್ತ ಕಂಬಳಿ ಬೀಸಿ ಮಳೆಗೆ ಆಹ್ವಾನ ನೀಡಿದ್ದರು. ಅದರೂ ವರುಣ ಕೃಪೆ ತೋರದೆ ಇದ್ದಾಗ ಹೈರಾಣಾಗಿದ್ದ ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮದ ರೈತರು, ಮಲೆ ಕುಂಬಳೂರು ಗುಡ್ಡದ ಕೊಲ್ಲಾಪುರ ಲಕ್ಷ್ಮೀಗೆ ಕಂಬಳಿ ಹಾಸಿ ಮಳೆಗಾಗಿ ವಿಶೇಷ ಪೂಜೆ ಮಾಡಿದ್ದರು.
ರಸ್ತೆಯಲ್ಲಿ ಸಿಕ್ಕ ಚಿನ್ನದ ಸರವನ್ನು ಪೊಲೀಸರಿಗೆ ಒಪ್ಪಿಸಿದ್ದ ಶಿಕ್ಷಕ ದಂಪತಿ: ರಸ್ತೆಯಲ್ಲಿ ಸಿಕ್ಕ ಚಿನ್ನದ ಮಾಂಗಲ್ಯ ಸರವನ್ನು ಪೊಲೀಸರಿಗೆ ಒಪ್ಪಿಸಿ ಶಿಕ್ಷಕ ದಂಪತಿ ಪ್ರಾಮಾಣಿಕತೆ ಮೆರೆದಿದ್ದರು. ಸುಮಾರು ಮೂರು ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನದ ಮಾಂಗಲ್ಯ ಸರ ಇದಾಗಿತ್ತು. ಶ್ರೀನಿವಾಸ- ಪೂರ್ಣಿಮಾ ತಮಗೆ ಸಿಕ್ಕ ಸರವನ್ನು ಪೊಲೀಸರ ಕೈಗೆ ಒಪ್ಪಿಸಿದ ಶಿಕ್ಷಕ ದಂಪತಿ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಹೋಬಳಿಯಲ್ಲಿ ಈ ಘಟನೆ ನಡೆದಿತ್ತು.
ಕೆಲಕಾಲ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದ ಶಾಸಕ ಡಿಜಿ ಶಾಂತನಗೌಡ: ಶಕ್ತಿ ಯೋಜನೆ ಜಾರಿ ವೇಳೆ ಡಿಫೆರೆಂಟ್ ಆಗಿ ಕಾಣಿಸಿಕೊಂಡಿದ್ದ ಹೊನ್ನಾಳಿ ಶಾಸಕ ಡಿಜಿ ಶಾಂತನಗೌಡ ಅವರು ಕೆಲಕಾಲ ಬಸ್ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು. ಮಹಿಳಾ ಪ್ರಯಾಣಿಕರಿಗೆ ಬಸ್ ಟಿಕೆಟ್ ನೀಡಿ ಹೊನ್ನಾಳಿಯಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದರು.
ಅತಿ ಹಿರಿಯ ಶಾಸಕರಾಗಿ ಶಾಮನೂರು ಆಯ್ಕೆ: 93 ವಯಸ್ಸಿನ ಶಾಮನೂರು ಶಿವಶಂಕರಪ್ಪ ಅವರು ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿ ಆಯ್ಕೆಯಾಗುವ ಮೂಲಕ ಅತಿ ಹಿರಿಯ ಶಾಸಕರು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೊತೆಗೆ ಅವರ ಪುತ್ರ ಎಸ್ಎಸ್ ಮಲ್ಲಿಕಾರ್ಜುನ್ ಕೂಡ ದಾವಣಗೆರೆ ಉತ್ತರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು.
ವಂದೇ ಭಾರತ್ ರೈಲಿಗೆ ಸ್ವಾಗತ: ಮೊಟ್ಟಮೊದಲ ಬಾರಿಗೆ ದಾವಣಗೆರೆಗೆ ಆಗಮಿಸಿದ್ದ ವಂದೇ ಭಾರತ್ ರೈಲನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿತ್ತು. ತುಂಗಭದ್ರಾ ನದಿ ಸೇತುವೆ ಮೇಲೆ ಸಂಚರಿಸಿದ ವಂದೇ ಭಾರತ್ ರೈಲಿನ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿತ್ತು. ಇನ್ನು, ಕೆಲ ಕಿಡಿಗೇಡಿಗಳು ರೈಲಿಗೆ ಕಲ್ಲು ಎಸೆದಿದ್ದು ಕಹಿ ಘಟನೆಯಾಗಿತ್ತು.
ಚಿಕನ್ ಬೆಲೆ ಏರಿಕೆ: ದಾವಣಗೆರೆಯಲ್ಲಿ ಚಿಕನ್ ಬೆಲೆ ಏಕಾಏಕಿ ಏರಿಕೆಯಾಗಿತ್ತು. ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿತ್ತು.
95 ಲಕ್ಷ ರೂಪಾಯಿ ದೋಚಿದ್ದ ದರೋಡೆಕೋರರು: 95 ಲಕ್ಷ ರೂ.ಗಳನ್ನು ಸಿನಿಮೀಯ ರೀತಿ ಗನ್ ತೋರಿಸಿ ದರೋಡೆಕೋರರು ದರೋಡೆ ಮಾಡಿದ್ದ ಘಟನೆ ಚನ್ನಗಿರಿ ತಾಲೂಕಿನ ಬೀರೂರು ರಾಜ್ಯ ಹೆದ್ದಾರಿಯಲ್ಲಿನ ಬುಕ್ಕಾಂಬುದಿ ಕೆರೆ ಬಳಿ ನಡೆದಿತ್ತು.
ಯಾತ್ರಿಕರು ಸುರಕ್ಷಿತವಾಗಿ ವಾಪಸ್: ಅಮರನಾಥ್ ಯಾತ್ರೆಗೆ ತೆರಳಿದ್ದ ಜಿಲ್ಲೆಯ ನಾಲ್ಕು ಜನ ಯಾತ್ರಾರ್ಥಿಗಳು ಸುರಕ್ಷಿತವಾಗಿ ವಾಪಸ್ ಆಗಿದ್ದರು.
ಎತ್ತುಗಳಿಗಾಗಿ ಕಾಯುತ್ತ ಕೊಟ್ಟಿಗೆಯಲ್ಲಿಯೇ ಕುಳಿತ ರೈತ: ಪ್ರೀತಿಯಿಂದ ಸಾಕಿದ್ದ ಎರಡು ಎತ್ತುಗಳು ಕಳ್ಳತನವಾಗಿದ್ದರಿಂದ ರೈತನೊಬ್ಬ ಕಳ್ಳತನವಾದ ಎತ್ತುಗಳಿಗಾಗಿ ಕಾಯುತ್ತ ಕೊಟ್ಟಿಗೆಯಲ್ಲಿಯೇ ಕುಳಿತ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕಂಕನಹಳ್ಳಿ ಗ್ರಾಮದಲ್ಲಿ ನಡೆದಿತ್ತು.
ದಂಪತಿ ಹಾಗೂ ಮಗು ಅನುಮಾನಾಸ್ಪದ ಸಾವು: ಅಮೆರಿಕದಲ್ಲಿ ವಾಸವಾಗಿದ್ದ ದಾವಣಗೆರೆ ಮೂಲದ ದಂಪತಿ ಹಾಗೂ ಮಗು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ನಲ್ಲಿ ವಾಸವಾಗಿದ್ದ ಯೋಗೇಶ್ ಹೊನ್ನಾಳ (37), ಅವರ ಪತ್ನಿ ಪ್ರತಿಭಾ ಹೊನ್ನಾಳ್ (35), ಪುತ್ರ (6) ಮೃತಪಟ್ಟವರು.
ಭದ್ರಾ ನೀರಿಗಾಗಿ ಬಂದ್: ಭದ್ರಾ ಜಲಾಶಯದಿಂದ ಭತ್ತದ ಬೆಳೆಗೆ ನೀರಿ ಹರಿಸುವಂತೆ ಭಾರತೀಯ ರೈತ ಒಕ್ಕೂಟದಿಂದ ಪ್ರತಿಭಟನೆ ಮಾಡಿ ರೈತರು ದಾವಣಗೆರೆ ಬಂದ್ಗೆ ಕರೆ ನೀಡಿದ್ದರು. ಬಂದ್ ಯಶಸ್ವಿಯಾಗಿತ್ತು. ಇದಕ್ಕೆ ಮಣಿದ ಸರ್ಕಾರ ಭದ್ರಾ ಜಲಾಶಯದಿಂದ ನೀರು ಹರಿಸಿತ್ತು.
ವಿರಕ್ತ ಮಠಕ್ಕೆ ಮುರುಘಾ ಶ್ರೀ ವಾಪಸ್: ಮುರುಘಾ ಶ್ರೀ ಅವರನ್ನು ಪೋಕ್ಸೋ ಪ್ರಕರಣ ಸಂಬಂಧ ಬೆಳಗ್ಗೆ ಬಂಧಿಸಿ ರಾತ್ರಿ ಬಿಡುಗಡೆ ಮಾಡಲಾಗಿತ್ತು. ಅವರು ಚಿತ್ರದುರ್ಗದ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾಗಿ ದಾವಣಗೆರೆ ವಿರಕ್ತ ಮಠಕ್ಕೆ ವಾಪಸ್ ಆಗಿದ್ದರು.
ಇದನ್ನೂ ಓದಿ: 2023ರಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನಾವಳಿಗಳ ಹಿನ್ನೋಟ