ದಾವಣಗೆರೆ : ಚಿತ್ರದುರ್ಗದ ಪಾಳೇಗಾರರು ಶೌರ್ಯ ಪರಾಕ್ರಮಕ್ಕೆ ಹೆಸರುವಾಸಿ. ದಾವಣಗೆರೆ ಹಾಗೂ ಚಿತ್ರದುರ್ಗದ ಭಾಗದಲ್ಲಿ ಆಳ್ವಿಕೆ ನಡೆಸಿದ್ದ ಪಾಳೇಗಾರರು ಇಡೀ ರಾಜ್ಯದಲ್ಲೇ ಹೆಸರುವಾಸಿಯಾಗಿದ್ದರು. ಅದೇ ಪಾಳೇಗಾರರ ಸಾಲಿನಲ್ಲಿ ಬರುವ ಹಿರೇಮದಕರಿನಾಯಕ ಕೂಡ 1721-48ರ ತನಕ ಆಳ್ವಿಕೆ ನಡೆಸಿ ವೀರಮರಣವನ್ನಪ್ಪಿದ್ದರು. ಆದರೆ, ಆತನ ಸಮಾಧಿಯನ್ನ ಇಂದಿಗೂ ಕಾಣಬಹುದು.
ದಾವಣಗೆರೆ ಪಾಳೇಗಾರರ ಆಳ್ವಿಕೆಯ ಕೇಂದ್ರವಾಗಿತ್ತು. ದಾವಣಗೆರೆ, ಉಚ್ಚಂಗಿದುರ್ಗ, ಮಾಯಕೊಂಡದ ಕೋಟೆಗಳನ್ನು ಕಟ್ಟಿ ಆಡಳಿತ ನಡೆಸುತ್ತಿದ್ದ ಪಾಳೇಗಾರರ ಪೈಕಿ ಹಿರೇಮದಕರಿನಾಯಕ ರಣರಂಗದಲ್ಲೇ ವೀರಮರಣನಪ್ಪಿದ್ದ. ಅದೇ ರಣರಂಗದಲ್ಲೇ ಸಮಾಧಿ ಮಾಡಲಾಗಿತ್ತಂತೆ. ಇದೀಗ ಅ ಸಮಾಧಿಯನ್ನು ದಾವಣಗೆರೆ ತಾಲೂಕಿನ ಮಾಯಕೊಂಡ ಗ್ರಾಮದಲ್ಲಿ ಕಾಣಬಹುದು.
ಸುಮಾರು 300 ವರ್ಷ ಹಳೆಯ ಸಮಾಧಿ ಇದಾಗಿದ್ದರಿಂದ ಸಾಕಷ್ಟು ಭಾರಿ ನಿಧಿಗಾಗಿ ಶೋಧ ಕೂಡ ನಡೆದಿದೆ. ಸರಿಯಾದ ರಕ್ಷಣೆ ಇಲ್ಲದೆ ಅನಾಥವಾಗಿದ್ದ ಹಿರೇಮದಕರಿನಾಯಕನ ಸಮಾಧಿಗೆ 2012ರಲ್ಲಿ ನಿಧಿಗಳ್ಳರು ಸಾಕಷ್ಟು ಬಾರಿ ಹಾನಿ ಮಾಡಿದ್ದರು. ಇದರಿಂದ ಕಂಗ್ಗೆಟ್ಟ ನಾಯಕ ಸಮಾಜ ತಮ್ಮ ಹಣದಲ್ಲೇ ಹಿರೇಮದಕರಿನಾಯಕನ ಸಮಾಧಿ ಪೋಷಿಸುತ್ತಿದೆ.
ಇದೀಗ ಅದನ್ನು ನೋಡಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಪುರಾತತ್ವ ಪ್ರವಾಸೋದ್ಯಮ ಇಲಾಖೆ ಇತ್ತ ಗಮನಹರಿಸಿ ಸಮಾಧಿ ಕಾಪಾಡಬೇಕಾಗಿದೆ.
ಮಾಯಕೊಂಡ ಲಡಾಯಿಯಲ್ಲಿ ಹಿರೇಮದಕರಿನಾಯಕ ವೀರಮರಣ : ಚಿತ್ರದುರ್ಗದ ಪಾಳೇಗಾರರು ಹಾಗೂ ಹರಪ್ಪನಹಳ್ಳಿಯ ಪಾಳೇಗಾರರ ನಡುವೆ ಸಾಮ್ರಾಜ್ಯಕ್ಕೋಸ್ಕರ ದ್ವೇಷ ಹೆಚ್ಚಾಗಿತ್ತು. ಸುಮಾರು 200 ಚದರ ಮೈಲಿಗೂ ಅಧಿಕ ಭೂಮಿ ಚಿತ್ರದುರ್ಗದ ಪಾಳೇಗಾರರ ಆಳ್ವಿಕೆಗೆ ಒಳಪಟ್ಟಿತು.
ಇದರ ಮೇಲೆ ಕಣ್ಣು ಹಾಯಿಸಿದ್ದ ಹರಪ್ಪನಹಳ್ಳಿಯ ಪಾಳೇಗಾರ ಸೋಮಶೇಖರ್ ನಾಯಕ 1748ರಲ್ಲಿ ಚಿತ್ರದುರ್ಗ ಸಂಸ್ಥಾನಕ್ಕೆ ಸೇರಿದ ಮಾಯಕೊಂಡ ಕೋಟೆ ಮೇಲೆ ಯುದ್ಧ ಸಾರಿದ. ಇದರಿಂದ ಹಿರೇಮದಕರಿನಾಯಕ ಹಾಗೂ ಸೋಮಶೇಖರ ನಾಯಕ ನಡುವೆ ಘನಘೋರ ಯುದ್ಧ ನಡೆದಿತ್ತು. ಅದನ್ನು ಮಾಯಕೊಂಡ ಲಡಾಯಿ ಎಂದು ಬಣ್ಣಿಸಲಾಗಿದೆ.
ಈ ಮಾಯಕೊಂಡ ಲಡಾಯಿ ಹಿರೇಮದಕರಿನಾಯಕ ಈ ರಣರಂಗದಲ್ಲೇ ಕೊನೆಯುಸಿರೆಳೆದನು. ಇನ್ನು, ಇದೇ ಯುದ್ಧದಲ್ಲಿ ಹಿರೇಮದಕರಿನಾಯಕ ಸಾವನಪ್ಪಿದ್ದರಿಂದ ಆತನ ಮಗ ಕಸ್ತೂರಿ ರಂಗಪ್ಪ ನಾಯಕ ಹರಪನಹಳ್ಳಿ ಪಾಳೇಗಾರರ ವಿರುದ್ಧ ಕಾದಾಡಿ ಹಿಮ್ಮೆಟ್ಟಿಸುತ್ತಾನೆ. ಆನಂತರ 17 ಎಕರೆ ಜಾಗದಲ್ಲಿ ಮಾಯಕೊಂಡದಲ್ಲೇ ಹಿರೇಮದಕರಿನಾಯಕನ ಸಮಾಧಿ ಸ್ಥಾಪಿಸಲಾಯಿತು ಎಂದು ಇತಿಹಾಸ ಸಾರುತ್ತಿದೆ.
1993ರಲ್ಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ: ಮಾಯಕೊಂಡದಲ್ಲಿ ಐತಿಹಾಸಿಕ ಮಹತ್ವ ಪಡೆದ ಹಲವು ಸ್ಮಾರಕಗಳಿವೆ. ರಾಜ ಹಿರೇಮದಕರಿ ನಾಯಕ ಸಮಾಧಿ, ಪಾಳೇಗಾರರ ಕಾಲದ ಓಬಳೇಶ್ವರ ದೇವಾಲಯ, ಚಂದಾಸಾಹೇಬರ ದರ್ಗಾ, ಮಹಾಸತಿ ಕಲ್ಲುಗಳು, ಇನ್ನಿತರ ಐತಿಹಾಸಿಕ ಸ್ಥಳಗಳು ಮಾಯಕೊಂಡದ ಗತವೈಭವ ಸಾರುತ್ತಿವೆ.
ಇದು 1993ರಲ್ಲಿಯೇ ಪುರಾತತ್ವ ಇಲಾಖೆ ರಾಜ್ಯ ಸಂರಕ್ಷಿತ ಸ್ಥಳವೆಂದು ಘೋಷಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಸ್ಮಶಾನದಲ್ಲಿ ಅನಾಥ ಸಮಾಧಿಯಾಗಿದ್ದರಿಂದ ಮಾಯಕೊಂಡ ನಾಯಕ ಸಮಾಜದವರು ಮನೆ ಮನೆಯಿಂದ ಹಣ ಪಡೆದು ಇದರ ಪೋಷಣೆ ಮಾಡುತ್ತಿದ್ದಾರೆ. ಒಬ್ಬರನ್ನು ಕಾವಲಿಗೆ ನೇಮಿಸಿ ಸಮಾಧಿ ನೋಡಿಕೊಳ್ಳುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸ್ಥಳಗಳು ಕಡಿಮೆ. ಮಾಯಕೊಂಡದಲ್ಲಿರುವ ಪ್ರತಿ ಸ್ಮಾರಕಗಳನ್ನು ಸಂಬಂಧ ಪಟ್ಟ ಇಲಾಖೆ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಸೆಳೆಯಬೇಕಾಗಿದೆ. ಹಿರೇಮದಕರಿನಾಯಕನ ಸಮಾಧಿಯನ್ನು ಕೇಂದ್ರ ಸ್ಮಾರಕವೆಂದು ಘೋಷಿಸಬೇಕಿದೆ.