ದಾವಣಗೆರೆ: ಕಳೆದ ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸದಾಶಿವ ಆಯೋಗದ ವರದಿ ಬಹಿರಂಗಗೊಳಿಸಬೇಕು. ಈ ವರದಿಯನ್ನು ರಾಜ್ಯಾದ್ಯಂತ ಚರ್ಚೆಗೊಳಪಡಿಸಿ ಅಂಗೀಕಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಕಳುಹಿಸಿಕೊಡಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ದಾವಣಗೆರೆಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖ ಡಾ. ಹೆಚ್.ವಿಶ್ವನಾಥ್, ನಾವು ಯಾವುದೇ ಜಾತಿ ವಿರೋಧಿ ಅಲ್ಲ. ಸದಾಶಿವ ಆಯೋಗದ ವರದಿಯಲ್ಲಿ ಮಾದಿಗ ಸಮುದಾಯಕ್ಕೆ ಮೀಸಲಾತಿ ನೀಡುವ ಸಂಬಂಧ ಉಲ್ಲೇಖಿಸಿರುವ ಅಂಶಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಗೋವಿಂದ ಕಾರಜೋಳ ಅವರನ್ನು ಉಪ ಮುಖ್ಯಮಂತ್ರಿಯಾಗಿಸಿದ ಬಿಜೆಪಿ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಕಾರಜೋಳ ನಮ್ಮ ಸಮುದಾಯದ ಹಿರಿಯ ನಾಯಕರ ಸಾಲಿಗೆ ಸೇರುತ್ತಾರೆ. ಅದೇ ರೀತಿಯಲ್ಲಿ ಸಮುದಾಯದ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮುಂದಾಗಬೇಕು ಎಂದರು.