ದಾವಣಗೆರೆ : ಎನ್ಪಿಎಸ್ ಯೋಜನೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಸಂಘ ಇಂದು ದಾವಣಗೆರೆಯಲ್ಲಿ ಬೃಹತ್ ಜಾಥಾ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿತು.
ನೌಕರರು ಇಳಿ ವಯಸ್ಸಿನಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ರೂಪಿಸಿದ ನಿಶ್ಚಿತ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರವು 2004ರಲ್ಲಿ ಹಾಗೂ ರಾಜ್ಯ ಸರ್ಕಾರ 2006ರಲ್ಲಿ ನೇಮಕಗೊಳ್ಳುವ ನೌಕರರಿಗೆ ರದ್ದು ಮಾಡಿತ್ತು. ನೂತನ ಪಿಂಚಣಿ ಯೋಜನೆ ಅಡಿಯಲ್ಲಿ ನೌಕರರಿಗೆ ಪಿಂಚಣಿ ನೀಡುವ ಉದ್ದೇಶದಿಂದ ಶೇ.10 ರಷ್ಟು ಕಟ್ ಮಾಡಿಕೊಳ್ಳುತ್ತಿದೆ, ಹಾಗೂ ಸರ್ಕಾರವು ಶೇ. 14 ರಷ್ಟು ವಂತಿಗೆ ರೂಪದಲ್ಲಿ ನೀಡುತ್ತಿದೆ. ಅಲ್ಲದೇ ಶೇಖರಣೆಗೊಳ್ಳುವ ಹಣವನ್ನು ವಿವಿಧ ಖಾಸಗಿ ಹಣಕಾಸಿನ ಸಂಸ್ಥೆಗಳ ಮೂಲಕ ಷೇರು ಪೇಟೆಯಲ್ಲಿ ತೊಡಗಿಸಿಕೊಳ್ಳುತ್ತಿದೆ.
ಇದರಿಂದ ನೌಕರರ ಪಿಂಚಣಿಗೆ ಯಾವುದೇ ಭದ್ರತೆ ಇಲ್ಲದ ಹಿನ್ನೆಲೆಯಲ್ಲಿ ಎನ್ಪಿಎಸ್ ಯೋಜನೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಸಾವಿರಾರು ಎನ್ಪಿಎಸ್ ನೌಕರರು, ಎಸಿ ಕಚೇರಿಯಿಂದ ಅಂಬೇಡ್ಕರ್ ಸರ್ಕಲ್ವರೆಗೆ, ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.