ದಾವಣಗೆರೆ: ಬೇಸಿಗೆ ಶುರುವಾಗುತ್ತಲೇ ಜಗಳೂರು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ನೀರಿನ ಬವಣೆ ಉಂಟಾಗುತ್ತದೆ. ಈ ಬಾರಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಈ ಸಂದರ್ಭದಲ್ಲಿ ಪ್ರಾಣಿಗಳ ಸಂಕಷ್ಟ ಹೇಳತೀರದು. ಜೀವ ಜಲ ಹುಡುಕಿಕೊಂಡು ಬಂದ ಎಮ್ಮೆಯೊಂದು ತೊಟ್ಟಿಗೆ ಎಗರಿದೆ. ಪರಿಣಾಮ ನೀರು ಸಿಗದೆ ಒದ್ದಾಟ ನಡೆಸಿದೆ.
ಕರುಳು ಹಿಂಡುವ 'ಎಮ್ಮೆ'ಯಾತನೆ:
ಜಗಳೂರು ತಾಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ನೀರಿನ ಸಮಸ್ಯೆ ಗಂಭೀರ ಸ್ವರೂಪ ತಾಳಿದೆ. ಇಡೀ ಗ್ರಾಮಕ್ಕೆ ಕೇವಲ ಎರಡು ಟ್ಯಾಂಕ್ ಕುಡಿಯುವ ನೀರು ಕಳುಹಿಸಿ ಕೊಡಲಾಗುತ್ತದೆ. ಆದರೆ, ಜಾನುವಾರುಗಳಿಗೆ ಕುಡಿಯಲು ನೀರಿನ ಸಮಸ್ಯೆ ಎದುರಾಗಿದ್ದು, ಅವುಗಳ ಸ್ಥಿತಿ ನೋಡಿದ್ರೆ ಸಂಕಟವಾಗುತ್ತದೆ. ಗ್ರಾಮದಲ್ಲಿ ಜಾನುವಾರುಗಳಿಗೆ ನೀರು ಕುಡಿಯಲು ಎರಡು ತೊಟ್ಟಿಗಳಿದ್ದು, ಸುಮಾರು ಮೂರು ತಿಂಗಳು ಈ ತೊಟ್ಟಿಗೆ ನೀರು ಬಿಟ್ಟಿಲ್ಲ. ಹೀಗಾಗಿ ಬಾಯಾರಿಕೆ ತಾಳಲಾರದೇ ಎಮ್ಮೆಯೊಂದು ನೀರು ಕುಡಿಯಲು ಬಂದಿದೆ. ತಳದಲ್ಲಿದ್ದ ಅಳಿದುಳಿದ ನೀರು ಬಾಯಿಗೆ ಸಿಕ್ಕಿಲ್ಲ, ಬಾಯಾರಿಕೆಯಿಂದ ಎಮ್ಮೆ ತೊಟ್ಟಿಗೆ ಜಿಗಿದಿದೆ. ತಳದಲ್ಲಿದ್ದ ನೀರನ್ನು ಕುಡಿದಿದೆ. ಆದರೆ ಬಳಿಕ ಹೊರ ಬರಲು ಹರಸಾಹಸ ಪಡುತ್ತಿರುವ ದೃಶ್ಯ ನೋಡಿದವರ ಕರುಳು ಹಿಂಡುವಂತಿದೆ.
ಇದಾದ ಬಳಿಕ, ಇನ್ನೊಂದು ಎಮ್ಮೆ ನೀರು ಕುಡಿಯಲು ಬಂದಾಗ ಅದರ ಬಾಯಿಗೆ ನೀರು ಸಿಗುವುದಿಲ್ಲ. ಅದು ಎಗರಿ ಎಗರಿ ನೀರು ಕುಡಿಯಲು ಪ್ರಯತ್ನ ಪಡುತ್ತದೆ.
ನೀರಿಗೆ ಹಾಹಾಕಾರ, ತಲೆ ಕೆಡಿಸಿಕೊಳ್ಳದ ಪಿಡಿಒ:
ಬರಪೀಡಿತ ಎಂದು ಘೋಷಣೆಯಾಗಿರುವ ಜಗಳೂರು ತಾಲೂಕಿನಲ್ಲಿ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ತಲೆದೋರಿದೆ. ದಿನಗಟ್ಟಲೇ ಕಾದರೂ ಒಂದು ಕೊಡ ನೀರೂ ಸಿಗದ ದುಸ್ಥಿತಿ ಇದೆ. ಸಮಸ್ಯೆಯ ಗಂಭೀರತೆ ಹೀಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿಲ್ಲ ಎಂದು ಜನಸಾಮಾನ್ಯರು ತೀವ್ರ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿರುವ ಬಹುತೇಕ ಬೋರ್ವೆಲ್ಗಳೂ ಬತ್ತಿದ್ದು, ಜನರು ಭೀಕರ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಪಿಡಿಒಗೆ ಹಲವು ಭಾರಿ ವಿಷಯ ತಿಳಿಸಿದ್ದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥ ಬಸವರಾಜ್ ಆರೋಪಿಸಿದರು.
ಇಡೀ ಊರಿಗೆ ಒಂದು ಟ್ಯಾಂಕು ನೀರು!
ಒಂದು ದಿನಕ್ಕೆ ಕೇವಲ ಒಂದೋ ಎರಡೋ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುತ್ತಿದೆ. ನೀರಿಗಾಗಿ ಜನರು ಹೋರಾಟ ನಡೆಸಿದ್ದು, ಜನ-ಜಾನುವಾರುಗಳ ಅಗತ್ಯಕ್ಕೆ ಅನುಗುಣವಾಗಿ ನೀರು ಪೂರೈಕೆ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.