ದಾವಣಗೆರೆ: ಚನ್ನಗಿರಿ ತಾಲೂಕಿನ ವಿವಿಧೆಡೆ ಅಡಿಕೆ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕೆರೆಕಟ್ಟೆ ಗ್ರಾಮದ ಛತ್ರಪತಿ ಅಲಿಯಾಸ್ ಗುಂಡ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಾಳಘಟ್ಟ ಲಂಬಾಣಿ ಹಟ್ಟಿ ಗ್ರಾಮದ ಹೆಚ್.ಎನ್. ಕೃಷ್ಣನಾಯ್ಕ, ಹರೀಶ್ ಕುಮಾರ್ ಬಂಧಿತರು.
ತೋಟದಿಂದ ಅಡಿಕೆ ಕಳವು ಮಾಡುತ್ತಿದ್ದ ಈ ಮೂವರು ಆರೋಪಿಗಳಿಂದ 8.22 ಲಕ್ಷ ರೂಪಾಯಿ ಮೌಲ್ಯದ 23.5 ಕ್ವಿಂಟಾಲ್ ಅಡಿಕೆ, ಕಳ್ಳತನಕ್ಕೆ ಬಳಸುತ್ತಿದ್ದ 2 ಲಕ್ಷ ರೂ. ಮೌಲ್ಯದ ಕಾರನ್ನು ಚನ್ನಗಿರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ವ್ಯಾಪ್ತಿಯ 12 ಕಡೆಗಳಲ್ಲಿ ಅಡಿಕೆ ಕೈಚಳಕ ತೋರಿಸಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಕ್ಕೆ ಅಡಿಕೆ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ಎಸ್ಪಿ ಹನುಮಂತರಾಯ ಅಭಿನಂದನೆ ಸಲ್ಲಿಸಿದ್ದಾರೆ.