ದಾವಣಗೆರೆ: ನಸುಕಿನಲ್ಲಿ ದೇವಾಲಯಕ್ಕೆ ನುಗ್ಗಿದ ಕಳ್ಳರು, ದೇವರ ಹುಂಡಿ ಒಡೆದು ಹಣವನ್ನು ದೋಚಿಕೊಂಡು ಹೋಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪೆನ್ನಸಮುದ್ರ ಗ್ರಾಮದ ಮಹಾರುದ್ರಸ್ವಾಮಿ ದೇವಾಲಯದಲ್ಲಿ ನಡೆದಿದೆ. ಗುರುವಾರ ಬೆಳಗಿನ ಜಾವ ಈ ಘಟನೆ ನಡೆದಿದೆ.
ಮೊದಲಿಗೆ ದೇವಸ್ಥಾನದ ಪ್ರವೇಶದ್ವಾರಕ್ಕೆ ಹಾಕಿದ್ದ ಬೀಗ ಮುರಿದ ಕಳ್ಳರು, ಒಳಗೆ ನುಗ್ಗಿದ್ದಾರೆ. ಬಳಿಕ ದೇವರ ಮುಂದೆ ಇರಿಸಿದ್ದ ಹುಡಿಯನ್ನು ಒಡೆದು ಹುಂಡಿಯಲ್ಲಿದ್ದ ಹಣವನ್ನು ದೋಚಿ ಕಾಲ್ಕಿತ್ತಿದ್ದಾರೆ. ಗುರುವಾರ ಬೆಳಗಿನ ಜಾವ ಈ ಕಳ್ಳತನ ನಡೆದಿದೆ ಎಂದು ಚನ್ನಗಿರಿ ಪೊಲೀಸರು ತಿಳಿಸಿದ್ದು, ಕಳ್ಳತನದ ದೃಶ್ಯ ದೇವಾಲಯದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ದಾವಣಗೆರೆ ಶ್ವಾನದಳ ಸೇರಿದಂತೆ ಬೆರಳಚ್ಚು ತಜ್ಞರು ಧಾವಿಸಿ ಪರಿಶೀಲನೆ ನಡೆಸಿದರು. ಪರಿಶೀಲನೆ ಬಳಿಕ ಚನ್ನಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹುಂಡಿಯಲ್ಲಿ ಐದು ಲಕ್ಷಕ್ಕಿಂತ ಹೆಚ್ಚು ಹಣ ಇತ್ತೆಂದು ಗ್ರಾಮಸ್ಥರು ಹೇಳುತ್ತಿದ್ದು, ಎಷ್ಟು ಹಣ ಕಳ್ಳತನವಾಗಿದೆ ಎಂಬುದು ಖಾತ್ರಿಯಾಗಿಲ್ಲ.
ಹಾವೇರಿಯಲ್ಲೂ ಇಂತಹುದೇ ಘಟನೆ: ಹಾವೇರಿ ತಾಲೂಕಿನ ನೀರಲಗಿ ಗ್ರಾಮದಲ್ಲಿ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಗುರುವಾರ ರಾತ್ರಿ ಗ್ರಾಮದೇವತೆ ಮತ್ತು ಹುಲಿಗೆಮ್ಮ ಎಂಬ ಎರಡು ದೇವಸ್ಥಾನಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಎರಡು ದೇವಸ್ಥಾನದ ಬಾಗಿಲಿನ ಬೀಗ ಮುರಿದ ಖದೀಮರು, ಸುಮಾರು 4 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ದೇವಿಯ 6 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ, ಎರಡು ಮಾಂಗಲ್ಯ ಸರ ಸೇರಿದಂತೆ ವಿವಿಧ ಬೆಲೆಬಾಳುವ ವಸ್ತುಗಳ ಕಳ್ಳತನ ಮಾಡಿದ್ದಾರೆ. ಬೆಳಗ್ಗೆ ದೇವಿಯ ಪೂಜೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿವೆ. ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.