ದಾವಣಗೆರೆ: ಕರ್ನಾಟಕದ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ನೀರನ್ನು ಮಹಾರಾಷ್ಟ್ರದ ಬೋರಾ ನದಿಗೆ ಹರಿಸಲು ಚಿಂತನೆ ನಡೆಸುವ ಕುರಿತ ಸಿಎಂ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಲು ಕೇಂದ್ರ ಸಚಿವ ಸುರೇಶ್ ಅಂಗಡಿ ನಿರಾಕರಿಸಿದ್ದಾರೆ.
ನಗರದ ರೈಲ್ವೆ ನಿಲ್ದಾಣದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಚುನಾವಣೆ ರ್ಯಾಲಿಯಲ್ಲಿ ಯಡಿಯೂರಪ್ಪ ನೀಡಿರುವ ಭರವಸೆ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳುವ ಮೂಲಕ ನುಣುಚಿಕೊಂಡರು.
ಇನ್ನು, ರೈಲ್ವೆ ಇಲಾಖೆಗೆ ಸಂಬಂಧಿಸಿದ ಪ್ರಶ್ನೆ ಮಾತ್ರ ಕೇಳಿ. ಬೇರೆ ವಿಚಾರಗಳ ಬಗ್ಗೆ ಕೇಳಬೇಡಿ. ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಕೈ ಮುಗಿದರಲ್ಲದೇ, ಮಾಧ್ಯಮದವರ ಜೊತೆ ಮಾತನಾಡಿ ಎದ್ದೇಳುವಾಗ ಮತ್ತೆ ಇದೇ ಪ್ರಶ್ನೆ ಕೇಳಿದ್ದಕ್ಕೆ ಏನೂ ಕೇಳುತ್ತಿಲ್ಲ ಎನ್ನುತ್ತ ತಮ್ಮ ಕಿವಿಗಳನ್ನು ಮುಚ್ಚಿಕೊಂಡು ಮುಂದಕ್ಕೆ ಸಾಗಿದರು.