ದಾವಣಗೆರೆ: ಬೆಣ್ಣೆನಗರಿಯಲ್ಲಿ ವಾಹನ ಪಾರ್ಕಿಂಗನದ್ದೇ ದೊಡ್ಡ ಸಮಸ್ಯೆ. ಏಕೆಂದರೆ ಜನನಿಬಿಡ ಪ್ರದೇಶಗಳಲ್ಲಿ ಬೀದಿಬದಿ ವ್ಯಾಪಾರಿಗಳದ್ದೇ ಕಾರುಬಾರು. ಅದರಲ್ಲಿಯೂ ವಾಣಿಜ್ಯ ಕೇಂದ್ರಿತ ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ತುಂಬಾ ತೊಂದರೆ ಆಗಿದೆ. ಜೊತೆಗೆ ನಗರದ ಅಂದಕ್ಕೂ ಧಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯು ಫುಟ್ಪಾತ್ ಹಾಗೂ ರಸ್ತೆ ಒತ್ತುವರಿ ಮಾಡಿದವರನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಕೆಲಸವೂ ಸಾಗಿದೆ.
ನಗರದ ರಾಮ್ ಅಂಡ್ ಕೋ ಸರ್ಕಲ್, ಜಯದೇವ ವೃತ್ತ, ಬಸ್ ನಿಲ್ದಾಣ, ಅಶೋಕ ಟಾಕೀಸ್ ವೃತ್ತ ಸೇರಿದಂತೆ ಹಲವು ಜಾಗಗಳಲ್ಲಿ ಜನಸಂದಣಿಯೇ ಇರುತ್ತದೆ. ಆದ್ರೆ ಆಗೊಮ್ಮೆ ಈಗೊಮ್ಮೆ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಲೇ ಇರುತ್ತದೆ. ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತಾದರೂ ವೇಗ ಸದ್ಯಕ್ಕೆ ಕಡಿಮೆಯಾಗಿದೆ. ಸ್ಮಾರ್ಟ್ ಸಿಟಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿರುವ ಕಾರಣ ವ್ಯಾಪಾರಿಗಳು ಸ್ಥಳ ಬದಲಾಯಿಸಿದ್ದಾರೆ.
ಇದನ್ನು ಓದಿ: ಡಿನೋಟಿಫಿಕೇಷನ್ ಪ್ರಕರಣ: ಸಿಎಂ ವಿರುದ್ಧ ಲೋಕಾಯುಕ್ತ ತನಿಖೆ ಮುಂದುವರೆಸಲು ಹೈಕೋರ್ಟ್ ಆದೇಶ
ಬೀದಿಬದಿ ವ್ಯಾಪಾರಿಗಳ ವ್ಯಾಪಾರ ವಹಿವಾಟು ಮುಂದುವರಿದಿದೆ. ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆಯು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗದಂತೆ ಬ್ಯುಸಿನೆಸ್ ನಡೆಸುವಂತೆ ಸೂಚನೆ ನೀಡಿದ್ದು, ಇದನ್ನು ಕೆಲ ವ್ಯಾಪಾರಿಗಳು ಪಾಲಿಸಿದರೆ, ಮತ್ತೆ ಕೆಲವರು ಕ್ಯಾರೆ ಎನ್ನುತ್ತಿಲ್ಲ. ಇದು ತಲೆನೋವಾಗಿ ಪರಿಣಮಿಸಿದೆ. ಚನ್ನಬಸಪ್ಪ ಬಟ್ಟೆ ಅಂಗಡಿ, ಮಾಲ್ಗಳು, ಹೋಟೆಲ್ಗಳು, ರೆಸ್ಟೋರೆಂಟ್ಗಳು ಸೇರಿದಂತೆ ಜನಪ್ರಿಯ ಮಾರುಕಟ್ಟೆ ಹಾಗೂ ವಾಣಿಜ್ಯ ಕೇಂದ್ರೀತ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಕಾಮನ್ ಎಂಬಂತಾಗಿದೆ. ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ಪೊಲೀಸರು ಕೆಲವೊಮ್ಮೆ ಹರಸಾಹಸ ಪಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆಲ ಪ್ರದೇಶಗಳಲ್ಲಿ ಒನ್ ವೇ ಮಾಡಲಾಗಿದ್ದರೂ, ಕೆಲವರು ಇಲ್ಲಿಯೇ ವಾಹನ ಸಂಚಾರ ಮಾಡುವುದರಿಂದ ಟ್ರಾಫಿಕ್ ನಿಯಂತ್ರಣ ಕಷ್ಟವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪ್ರಮುಖ ಜಂಕ್ಷನ್ಗಳಲ್ಲಿ ಸಿಸಿಟಿವಿ ಅಳವಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಇನ್ನು ಟ್ರಾಫಿಕ್ ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ತಕ್ಕ ಪಾಠ ಕಲಿಸಲು ನಿರ್ಧರಿಸಲಾಗಿದ್ದು, ಸ್ಪೀಡ್ಗೆ ಬ್ರೇಕ್ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಪ್ರಮುಖ ಜಂಕ್ಷನ್ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿದೆ.