ದಾವಣಗೆರೆ: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದ ವಿರೋಧಿಸಿ ಅಕ್ಟೋಬರ್ 31 ರಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿದೆ.
ಒಂದು ವೇಳೆ ಈ ಒಪ್ಪಂದವಾದರೆ ರೈತರ ಬದುಕು ಬೀದಿಗೆ ಬರಲಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ಆತಂಕ ವ್ಯಕ್ತಪಡಿಸಿದರು. ಈ ಒಪ್ಪಂದದಿಂದ ವಿದೇಶಿ ಹೂಡಿಕೆದಾರರು ಕೃಷಿ ಭೂಮಿಯನ್ನು ಖರೀದಿಸಲು ಅನುಕೂಲವಾಗುತ್ತದೆ.
ಸೂಪರ್ ಮಾರ್ಕೆಟ್ ಮತ್ತು ದೊಡ್ಡ ಕಂಪನಿಗಳು ನೇರ ಚಿಲ್ಲರೆ ವ್ಯಾಪಾರದಲ್ಲಿ ಭಾಗವಹಿಸುವುದರಿಂದ ಸ್ಥಳೀಯ ಮಾರುಕಟ್ಟೆ ಹಾಗೂ ಸ್ಥಳೀಯ ವ್ಯಾಪಾರಸ್ಥರನ್ನು ಅಳಿಸಿ ಹಾಕಲಿವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆತಂಕ ವ್ಯಕ್ತಪಡಿಸಿದೆ.