ದಾವಣಗೆರೆ : ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ. ಅದರನ್ವಯ ಜಿಲ್ಲೆಯಲ್ಲಿ ಕಡಲೆಕಾಳು ಖರೀದಿಗೆ ನೋಂದಣಿ ಪ್ರಾರಂಭಿಸಬೇಕು. ರೈತರಿಗೆ ಯಾವುದೇ ಗೊಂದಲವಾಗದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಬಲ ಬೆಲೆಯಡಿ ಕಡಲೆಕಾಳು ಖರೀದಿ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಉತ್ತಮ ಗುಣಮಟ್ಟದ ಕಡಲೆಕಾಳಿಗೆ ಸರ್ಕಾರ ಪ್ರತಿ ಕ್ವಿಂಟಾಲ್‍ಗೆ 5230 ರೂ. ನಿಗದಿಪಡಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕಡಲೆಕಾಳಿನ ಬೆಲೆ ಕುಸಿದಿದ್ದು, ರೈತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ.
ಹೀಗಾಗಿ, ರೈತರ ಹಿತಕಾಯಲು ಸರ್ಕಾರದ ವತಿಯಿಂದ ಜಿಲ್ಲೆಯಲ್ಲಿ ಕೂಡಲೇ ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿಗೆ ಜಗಳೂರು ಎಪಿಎಂಸಿ ಆವರಣದಲ್ಲಿ ರೈತರ ನೋಂದಣಿ ಕಾರ್ಯ ಪ್ರಾರಂಭಿಸಬೇಕು.
ನೋಂದಣಿಗೂ ಮುನ್ನ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿರಬೇಕು. ರೈತರು ಅವಸರ ಮಾಡಿ ಎಲ್ಲಿಯೂ ಕೂಡ ಬೇರೆ ಕಡೆಗೆ ಮಾರಾಟ ಮಾಡಿ ನಷ್ಟ ಅನುಭವಿಸುವುದು ಬೇಡ ಎಂದರು.
ಇದನ್ನೂ ಓದಿ: ಉತ್ತರ ಕರ್ನಾಟಕ ಭಾಗದಲ್ಲಿ ಮಹಾದಾಯಿಗಾಗಿ ಮತ್ತೆ ಮೊಳಗಲಿದೆ ಹೋರಾಟದ ರಣಕಹಳೆ..