ದಾವಣಗೆರೆ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಆರಂಭಿಸಲಾಗಿರುವ ಕೊರೊನಾ ಸೋಂಕು ನಿವಾರಕ ಮಾರ್ಗ ಘಟಕದ ಉದ್ಘಾಟನೆಯನ್ನು ಮಹಾನಗರ ಪಾಲಿಕೆಯ ಮೇಯರ್ ಅಜಯ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ನೆರವೇರಿಸಿದರು.
ಎಪಿಎಂಸಿಗೆ ಬೇರೆ ಬೇರೆ ಕಡೆಯಿಂದ ಸರಕು ಸಾಗಣೆ ವಾಹನಗಳು ಬರುತ್ತವೆ. ಚಾಲಕರು ಹಾಗೂ ಕ್ಲೀನರ್ ಬರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೊರೊನಾ ಸೋಂಕು ನಿವಾರಕ ಮಾರ್ಗ ತೆರೆಯಲಾಗಿದೆ. ಬೇರೆ ಕಡೆಯಿಂದ ಬರುವವರು ಸೋಂಕು ತಂದಿರಬಹುದು ಎಂಬ ಶಂಕೆಯಿಂದ ಈ ಮಾರ್ಗ ಆರಂಭಿಸಲಾಗಿದ್ದು, ಒಮ್ಮೆ ಇದರ ಒಳಗೆ ಬಂದರೆ ಸೋಂಕು ಹರಡುವುದಿಲ್ಲ. ಜನನಿಬಿಡ ಪ್ರದೇಶದ ಐದು ಕಡೆಗಳಲ್ಲಿ ಸೋಂಕು ನಿವಾರಕ ಮಾರ್ಗ ಘಟಕ ತೆರೆಯಲಾಗುವುದು ಎಂದು ಡಿಸಿ ತಿಳಿಸಿದರು.
ಬೆಂಗಳೂರು, ಮಂಗಳೂರು ಸೇರಿದಂತೆ ಸೋಂಕು ಇರುವ ಜಿಲ್ಲೆಗಳಿಂದ ಸುಮಾರು 19 ಸಾವಿರ ಮಂದಿ ಜಿಲ್ಲೆಗೆ ಆಗಮಿಸಿದ್ದು, ಎಲ್ಲರ ಮೇಲೆ ನಿಗಾ ವಹಿಸಲಾಗಿದೆ. ಕೆಲವರು ಈಗಾಗಲೇ 14 ದಿನದ ಕ್ವಾರಂಟೈನ್ ಮುಗಿಸಿದ್ದು, ಮತ್ತೆ ಕೆಲವರು ಕ್ವಾರಂಟೈನ್ನಲ್ಲಿದ್ದಾರೆ. ದೆಹಲಿ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಬಂದ 41 ಜನರ ಪಟ್ಟಿಯನ್ನು ಎಸ್ಪಿ ನೀಡಿದ್ದು, ಇವರನ್ನು ಪರೀಕ್ಷೆಗೆ ಒಳಪಡಿಸುತ್ತೇವೆ ಎಂದು ತಿಳಿಸಿದರು.