ದಾವಣಗೆರೆ : ಸಿಎಂ ಬಿ ಎಸ್ ಯಡಿಯೂರಪ್ಪ ಬದಲಾವಣೆ ಚರ್ಚೆ ಹಿನ್ನೆಲೆಯಲ್ಲಿ ಬಿಎಸ್ವೈ ಬೆನ್ನಿಗೆ ಶ್ರೀಶೈಲ ಜಗದ್ಗುರು ನಿಂತಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಶ್ರೀಶೈಲ ಮಠ ಸ್ಪಷ್ಟವಾಗಿ ಯಡಿಯೂರಪ್ಪನವರ ಬೆನ್ನಿಗೆ ಇದ್ದು, ಪಂಚಪೀಠಗಳು ಕೂಡ ಅವರ ಪರವಾಗಿ ನಿಲ್ಲುತ್ತವೆ ಎಂದು ಶ್ರೀಶೈಲ ಜಗದ್ಗುರು ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಎಲ್ಲಾ ಜನಾಂಗದವರಿಗೆ ನ್ಯಾಯ ದೊರಕಿಸಿಕೊಟ್ಟಿರುವ ಕೀರ್ತಿ ಯಡಿಯೂರಪ್ಪವರಿಗೆ ಸಲ್ಲುತ್ತದೆ. ಅವರಿಗೆ ಏನಾದ್ರೂ ಆದ್ರೆ ಎಲ್ಲಾ ಜನಾಂಗದವರು ಅವರ ಪರವಾಗಿ ನಿಲ್ಲುತ್ತಾರೆ ಎಂದ್ರು. ಬೇರೆ ಪಕ್ಷದ ಮುಖಂಡರಾದ ಶಾಮನೂರು ಶಿವಶಂಕರಪ್ವನವರು ಕೂಡ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ರಾಜ್ಯದ ಸಿಎಂ ಬಿಎಸ್ವೈ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದವರು, ಜನರು ಕೂಡ ಅವರನ್ನ ಪ್ರಶ್ನಾತೀತ ನಾಯಕ ಎಂಬ ವಿಶ್ವಾಸದಲ್ಲಿ ಬೆಂಬಲಿಸಿದ್ದು, ಎಲ್ಲಾ ಚುನಾವಣೆಗಳಲ್ಲಿ ರಾಜ್ಯದ ಜನ ಯಡಿಯೂರಪ್ಪಗೆ ಬೆಂಬಲಿಸಿದ್ದಾರೆ. ಜನಾಭಿಮತ ಬಿಎಸ್ವೈ ಪರವಾಗಿದೆ, ಈ ಕಾರಣಕ್ಕೆ ಕೇಂದ್ರ ಸರ್ಕಾರ, ಹೈಕಮಾಂಡ್ ಅವರನ್ನ ಚೆನ್ನಾಗಿ ನಡೆಸಿಕೊಳ್ಳಬೇಕು, ಅಗೌರವಯುತವಾಗಿ ನಡೆಸಿಕೊಳ್ಳಬಾರದು ಎಂದ್ರು.
ಯಡಿಯೂರಪ್ಪ ಹಿಂದೆ ಸರಿದರೆ ಅಥವಾ ಸರಿಸುವ ಪ್ರಕ್ರಿಯೆಯಾದರೆ ಪಕ್ಷಕ್ಕೆ ತೊಂದರೆ ಕಟ್ಟಿಟ್ಟ ಬುತ್ತಿ ಎಂದರು. ಬೆಳವಣಿಗೆ ಆಗ್ತಾ ಇರೋದರ ಬಗ್ಗೆ ಸಮಾನ ಪೀಠಾಧ್ಯಕ್ಷರ ಜೊತೆ ಮಾತುಕತೆ ನಡೆಸುತ್ತೇವೆ, ಬಿಎಸ್ವೈ ಅವರೇ ಮುಂದುವರೆಯುವುದಾದರೆ ಪಕ್ಷಕ್ಕೆ ರಾಜ್ಯಕ್ಕೆ ಒಳ್ಳೆಯದು. ನಾಳೆ ನಾನು ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದು ನಂತರ ಮಾತನಾಡುತ್ತೇನೆ ಎಂದರು.