ದಾವಣಗೆರೆ: ಸಿದ್ದರಾಮಯ್ಯ, ಕಾಂಗ್ರೆಸ್ಗೆ ನನ್ನ ಹೆಸರು ಜಪಿಸದೇ ನಿದ್ರೆ ಬರೋದಿಲ್ಲ, ಹಾಗಾಗಿ ಸಿದ್ದರಾಮಯ್ಯ ಸದಾ ನನ್ನ ಹೆಸರು ಜಪಿಸುತ್ತಿದ್ದಾರೆ. ಸಿದ್ದರಾಮಯ್ಯ ಒಬ್ಬ ಸ್ವಯಂ ಘೋಷಿತ ಅಹಿಂದ ನಾಯಕ, ನಾವು ರಾಜಕೀಯ ಉದ್ದೇಶದಿಂದ ಎಸ್ಟಿಗೆ ಮೀಸಲಾತಿ ನೀಡಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ಎಸ್ಟಿ ಸಮಾವೇಶದ ಪೂರ್ವಭಾವಿ ಸಭೆಗೆ ಭಾಗಿಯಾಗುವ ಮುನ್ನ ಮಾತನಾಡಿದ ಅವರು, ಎಸ್ಟಿ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಕೆಳ ಸಮುದಾಯಕ್ಕೆ ಬೆನ್ನಿಗೆ ಚೂರಿ ಹಾಕಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮೀಸಲಾತಿ ಕೊಡಬಹುದಿತ್ತು. ಆದರೆ, ಮೀಸಲಾತಿ ಕೊಡಲು ಅವರಿಗೆ ರಾಜಕೀಯ ಇಚ್ಛಾಶಕ್ತಿ ಕೊರತೆ ಇತ್ತು ಎಂದರು.
ಇತರೆ ಸಮುದಾಯಗಳ ಮೀಸಲಾತಿಗೆ ಆಗ್ರಹ : ಎಸ್ಟಿ ಮೀಸಲಾತಿ ಬೆನ್ನಲ್ಲೇ ಇತರ ಸಮುದಾಯಗಳ ಮೀಸಲಾತಿಗೆ ಆಗ್ರಹಕ್ಕೆ ಶ್ರೀರಾಮುಲು ಪ್ರತಿಕ್ರಿಯಿಸಿ ಮೀಸಲಾತಿ ಕೊಡಬೇಕೆಂದರೆ ಕುಲಶಾಸ್ತ್ರ ಅಧ್ಯಯನ ಆಗಬೇಕು. ಕುಲಶಾಸ್ತ್ರ ಅಧ್ಯಯನ ಬಳಿಕ ಮೀಸಲಾತಿ ಕೊಡಬಹುದು. ಪಂಚಮಸಾಲಿ ಸಮಾಜ ಸೇರಿದಂತೆ ಬೇರೆ ಯಾವುದೇ ಸಮುದಾಯಕ್ಕೆ ಮೀಸಲಾತಿ ಕೊಡಲು ನನ್ನ ವಿರೋಧವಿಲ್ಲ.
ನಾನು ನನ್ನ ಸಮುದಾಯಕ್ಕೆ ಮೀಸಲಾತಿ ನೀಡಿದ್ದಕ್ಕೆ ಸಿಎಂಗೆ, ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಅದಕ್ಕಾಗಿ ಬಳ್ಳಾರಿಯಲ್ಲಿ ಎಸ್ಟಿ ಸಮಾವೇಶ ಆಯೋಜನೆ ಮಾಡಲಾಗಿದೆ. ಎಸ್ಟಿ ಸಮಾವೇಶಕ್ಕೆ ಆಹ್ವಾನ ನೀಡಲು ಪ್ರವಾಸ ಮಾಡುತ್ತಿದ್ದೇನೆ ಎಂದರು.
ಇದನ್ನೂ ಓದಿ : ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ: ಸರ್ಕಾರ ಹೊರಡಿಸಲಿರುವ ಸುಗ್ರೀವಾಜ್ಞೆಯಲ್ಲಿ ಏನಿರಲಿದೆ?