ಹರಿಹರ: ತಾಲೂಕಿನ ರಾಜನಹಳ್ಳಿ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಪೀಠದಲ್ಲಿ ಎರಡನೇ ವರ್ಷದ ಜಾತ್ರೆ ಅದ್ಧೂರಿಯಾಗಿ ಜರುಗಿತು.
ಶನಿವಾರ ಬೆಳಗ್ಗೆ 7ಕ್ಕೆ ಗ್ರಾಮದಿಂದ ಶ್ರೀಮಠದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಬೃಹತ್ ಅದ್ಧೂರಿ ಮೆರವಣಿಗೆಯನ್ನು ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಸಲಾಯಿತು.
ಬೆಳಗ್ಗೆ 8ಕ್ಕೆ ಧಾರವಾಡದ ಮನಗುಂಡಿ ಗುರು ಬಸವ ಮಹಾಮನೆಯ ಬಸವಾನಂದ ಶ್ರೀಗಳು ಶ್ರೀ ವಾಲ್ಮೀಕಿ ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ರಾಜನಹಳ್ಳಿ ಗ್ರಾಮದಿಂದ ಪ್ರಾರಂಭವಾದ ಆನೆ ಮತ್ತು ಬಾಜಾ ಭಜಂತ್ರಿಗಳನ್ನೊಳಗೊಂಡ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕುಂಭವನ್ನೊತ್ತು ಮೆರವಣಿಗೆಗೆ ಮೆರಗು ನೀಡಿದರು.
ನಂತರ ಸಾಮೂಹಿಕ ವಿವಾಹ ಮಹೋತ್ಸವವನ್ನು ಶಾಸಕ ಎಸ್.ರಾಮಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಸ್ತುತ ದಿನಮಾನದಲ್ಲಿ ಮದುವೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಬಡವರು ತಮ್ಮ ಮಕ್ಕಳಿಗೆ ಗಂಡು ಹೆಣ್ಣನ್ನು ಹುಡುಕಿ ಮದುವೆ ಮಾಡುವುದು ದೊಡ್ಡ ಸಾಹಸದ ಕೆಲಸ. ಶ್ರೀ ಮಠವು ಸಾಮೂಹಿಕ ವಿವಾಹವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ವಾಲ್ಮೀಕಿ ಸಮಾಜವು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಸಮಾಜದಲ್ಲಿ ಕೆಲವರನ್ನು ಹೊರತುಪಡಿಸಿದರೆ ಉಳಿದ ಕುಟುಂಬಗಳು ಬಡತನದಲ್ಲಿ ಕೈ ತೊಳೆಯುತ್ತಿವೆ. ಸಮಾಜಕ್ಕೆ ರಾಜಕೀಯದಲ್ಲಿಯೂ ವಿಶೇಷ ಸ್ಥಾನಮಾನ ನೀಡುವುದರ ಮೂಲಕ ಸಮಾಜದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಬಿ.ಪಿ ಹರೀಶ್, ಹೆಚ್.ಎಸ್ ಶಿವಶಂಕರ್ ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿದರು.