ದಾವಣಗೆರೆ: "ಜಾತಿ ಗಣತಿ ವರದಿಯನ್ನು ಜಾರಿ ಮಾಡಬಾರದು ಎಂದು 67 ಶಾಸಕರು ಸಹಿ ಸಂಗ್ರಹ ಮಾಡಿ ಮುಖ್ಯಮಂತ್ರಿಗಳಿಗೆ ಕೊಟ್ಟಿದ್ದಾರೆ. ನಾನು ಆ ಎಲ್ಲಾ ಶಾಸಕರಿಗೆ ಹೇಳಲು ಬಯಸುತ್ತೇನೆ, ಇನ್ನು ಜಾತಿ ಗಣತಿ ವರದಿ ಸರ್ಕಾರದ ಕೈಸೇರಿಲ್ಲ, ವರದಿಯನ್ನು ಸರ್ಕಾರ ಇನ್ನೂ ಸ್ವೀಕಾರ ಮಾಡಿಲ್ಲ. ವರದಿಯಲ್ಲಿನ ಲೋಪವನ್ನು ಹೇಗೆ ಕಂಡುಹಿಡಿಯುತ್ತೀರಾ ?. ವಿರೋಧ ಯಾಕೆ ಮಾಡುತ್ತಿರಾ?. ವರದಿಯನ್ನು ಮೊದಲು ಸರ್ಕಾರ ಸ್ವೀಕಾರ ಮಾಡಲಿ. ಆನಂತರ ವರದಿಯ ಸಾಧಕ - ಬಾಧಕಗಳ ಬಗ್ಗೆ ಚರ್ಚೆ ಮಾಡೋಣ" ಎಂದು ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿದರು.
ದಾವಣಗೆರೆ ತಾಲೂಕಿನ ರುದ್ರನಕಟ್ಟೆ ಗ್ರಾಮದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಸರ್ಕಾರ ಸ್ವೀಕಾರ ಮಾಡದ ಜಾತಿ ಗಣತಿ ವರದಿಯಲ್ಲಿ ಲೋಪ ಇದೆ, ಸಮಾವೇಶವೊಂದರಲ್ಲಿ ಕೆಲ ಮಠಾಧೀಶರು ಮತ್ತು ಶಾಸಕರು ವಿರೋಧ ಮಾಡುವುದಾದರೆ ಇದು ಒಳ್ಳೆಯ ಬೆಳವಣಿ ಅಲ್ಲ. ಸಿಎಂ ಸಿದ್ದರಾಮಯ್ಯ ಅವರು ತಕ್ಷಣ ಕಾಂತರಾಜು ಅವರು ಕೊಟ್ಟಿರುವ ವರದಿಯನ್ನು ಸ್ವೀಕಾರ ಮಾಡಲೇಬೇಕು ಎಂದು ನಾವು ಒತ್ತಾಯಿಸುತ್ತೇವೆ. ಬಹಳಷ್ಟು ಜನರಲ್ಲಿ ತಪ್ಪು ಕಲ್ಪನೆ ಇದೆ, ಕಾಂತರಾಜು ಅವರು ಜಾತಿ ಗಣತಿಯನ್ನು ಮಾತ್ರ ಮಾಡಿಲ್ಲ. ಎಲ್ಲಾ ಸಮುದಾಯಗಳ ಸಾಮಾಜಿಕ ಸ್ಥಿತಿಗತಿಗಳನ್ನು ವರದಿ ಮಾಡಿದ್ದಾರೆ. ಅವರು 56 ಅಂಶಗಳನ್ನು ಗಣತಿ ಮಾಡಿದ್ದಾರೆ" ಎಂದರು.
"ವರದಿಯನ್ನು ಜಾರಿ ಮಾಡಬಾರದು ಎಂದು ಸಹಿ ಮಾಡಿರುವ 67 ಶಾಸಕರನ್ನು ಮುಂದಿನ ಚುನಾವಣೆಯಲ್ಲಿ ನೀವು ತಿರಸ್ಕಾರ ಮಾಡಬೇಕು. ಜಾತಿ ಗಣತಿಯನ್ನು ವಿರೋಧಿಸುವ ಜನಪ್ರತಿನಿಧಿಗಳು ವೋಟ್ ಕೇಳಲು ಮನೆ ಬಳಿ ಬಂದಾಗ ಎಲ್ಲಾ ಹಿಂದುಳಿದ ವರ್ಗದವರು ನಾವು ನಿಮಗೆ ವೋಟ್ ಹಾಕುವುದಿಲ್ಲ ಎಂದು ಹೇಳಿ ಅವರಿಗೆ ಬುದ್ಧಿ ಕಲಿಸಬೇಕು. ವರದಿ ಜಾರಿ ಬಗ್ಗೆ ಒಬಿಸಿ ಶಾಸಕರು, ಎಸ್ಸಿ - ಎಸ್ಟಿ ಶಾಸಕರು ಮಾತನಾಡುತ್ತಿಲ್ಲ. ಎಲ್ಲಾ ಹಿಂದುಳಿದ, ಎಸ್ಸಿ -ಎಸ್ಟಿ ಶಾಸಕರು ಒಗ್ಗಟ್ಟಾಗಿ ಮಾತನಾಡ ಬೇಕು. ಸಿದ್ದರಾಮಯ್ಯ ನವರ ಮುಖ ನೋಡಿ ನಿಮಗೆ ವೋಟ್ ಹಾಕಿರುವುದು. ನೀವು ಬಡವರ, ಶೋಷಿತರ, ಹಿಂದುಳಿದವರ ಪರ ಮಾತನಾಡುತ್ತೀರಾ ಎಂಬ ಕಾರಣ ವೋಟ್ ಹಾಕಿದ್ದಾರೆ. ಹಿಂದುಳಿದ ಮತ್ತು ಎಸ್ಸಿ -ಎಸ್ಟಿ ಶಾಸಕರು ಸುಮ್ಮನೆ ಇದ್ದರೆ ಜಾತಿ ಗಣತಿ ವರದಿ ಅನುಷ್ಠಾನಗೊಳ್ಳುವುದಿಲ್ಲ" ಎಂದು ಹೇಳಿದರು.
ಜ.5ರಂದು ನಿರಂಜನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಸಿಎಂ ಭೇಟಿ: "ಎಲ್ಲಾ ಪಕ್ಷಗಳಲ್ಲಿರುವ ಹಿಂದುಳಿದ, ಎಸ್ಟಿ -ಎಸ್ಸಿ ಶಾಸಕರು ವರದಿ ಬಗ್ಗೆ ಮಾತನಾಡದೇ ಇದ್ದರೆ ಮೋಸ ಮಾಡಿದಂತಾಗುತ್ತದೆ. ಆದ್ದರಿಂದ ಜ.5ರಂದು ಎಲ್ಲಾ ಹಿಂದುಳಿದ, ಶೋಷಿತ ಸಮಾಜಗಳ ಸ್ವಾಮೀಜಿಗಳು ಕಾಗಿನೆಲೆ ನಿರಂಜನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಜಾತಿ ಗಣತಿ ವರದಿ ಬಿಡುಗಡೆಗೆ ಕೋರಿದ್ದ ಅರ್ಜಿಗೆ ಮಧ್ಯಂತರ ಅರ್ಜಿ ಸಲ್ಲಿಕೆ : ವರದಿ ತಿರಸ್ಕರಿಸಲು ಮನವಿ