ದಾವಣಗೆರೆ: ಲೋಕಾಯುಕ್ತ ಅಧಿಕಾರಿಗಳು ರಾಜ್ಯದಲ್ಲಿ ಭ್ರಷ್ಟರ ಬೇಟೆಯನ್ನು ಮುಂದುವರಿಸಿದ್ದಾರೆ. ಆರೋಪಿಯಿಂದ ಲಂಚ ಸ್ವೀಕರಿಸುವ ವೇಳೆ ಸರ್ಕಾರಿ ವಿಶೇಷ ಅಭಿಯೋಜಕಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ರೇಖಾ ಕೋಟೆಗೌಡರ ಲೋಕಾಯುಕ್ತರ ಬಲೆಗೆ ಬಿದ್ದಿರುವ ಸರ್ಕಾರಿ ವಿಶೇಷ ಅಭಿಯೋಜಕಿ. ಒಂದು ಲಕ್ಷ 87 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ರೇಖಾ ಕೋಟೆಗೌಡರ ಅವರು ದಾವಣಗೆರೆಯ ವಿಶೇಷ ಪೋಕ್ಸೋ ಕೋರ್ಟ್ನ ವಿಶೇಷ ಅಭಿಯೋಜಕಿಯಾಗಿದ್ದು, ದಾವಣಗೆರೆ ನಗರದ ಪಿಜೆ ಬಡಾವಣೆಯ ಅವರ ನಿವಾಸದಲ್ಲಿ ಲಂಚ ಸ್ವೀಕಾರ ಮಾಡುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಪೋಕ್ಸೋ ಪ್ರಕರಣದ ಆರೋಪಿ ಮದನ್ ಎಂಬಾತನಿಂದ ಮೂರು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ. ಕೆಲ ದಿನಗಳ ಹಿಂದೆ ಒಂದು ಲಕ್ಷದ 13 ಸಾವಿರ ರೂಪಾಯಿ ಪಡೆದಿದ್ದ ಅಭಿಯೋಜಕಿ, ಉಳಿದ ಹಣ 1.87 ಲಕ್ಷ ಹಣ ಇಂದು ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಮದನ್ ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದು, ಸಂತ್ರಸ್ತೆ ಪರವಾದ ಮಾಡಬೇಕಾದ ವಿಶೇಷ ಅಭಿಯೋಜಕಿ ರೇಖಾ ಕೋಟೆಗೌಡರ, ಕೇಸ್ನಲ್ಲಿ ಆರೋಪಿಗೆ ಅನುಕೂಲ ಮಾಡುವುದಾಗಿ ಹೇಳಿ ಲಂಚ ಪಡೆದಿದ್ದರು. ಇನ್ನು ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ಗಳಾದ ಆಂಜನೇಯ, ರಾಷ್ಟ್ರಪತಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅನುಮತಿ ಇಲ್ಲದೆ ಡಿಕೆಶಿ ಮಕ್ಕಳ ಫೋಟೋ ಬಳಕೆ: ಯೂಟ್ಯೂಬ್ ಚಾನಲ್ಗಳ ವಿರುದ್ಧ ಎಫ್ಐಆರ್
ದೊಡ್ಡಬಳ್ಳಾಪುರದಲ್ಲಿ ಮೇಕೆಗಳನ್ನು ಕದ್ದೊಯ್ದ ಕಳ್ಳರು : ತಾಲೂಕಿನಲ್ಲಿ ಕುರಿ, ಮೇಕೆಗಳ ಕಳ್ಳತನ ಮುಂದುವರೆದಿದ್ದು, ಇಂದು ಮುಂಜಾನೆ ಸಮಯದಲ್ಲಿ ಗ್ರಾಮಕ್ಕೆ ನುಗ್ಗಿದ ಕಳ್ಳರು ಮನೆ ಮುಂದೆ ಕಟ್ಟಾಕಲಾಗಿದ್ದ ಮೇಕೆಗಳನ್ನ ಕದ್ದು ಪರಾರಿಯಾಗಿದ್ದಾರೆ, ಸದ್ಯ ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಲಿಂಗನಹಳ್ಳಿ ಗ್ರಾಮದಲ್ಲಿ ಭಾನುವಾರ ಎರಡು ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಗ್ರಾಮದ ಪ್ರಭಾಕರ್ ಎಂಬುವವರಿಗೆ ಸೇರಿದ ಮೂರು ಮೇಕೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಕಳ್ಳತನ ಕೃತ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಭಾಕರ್ ಅವರ ಸೋದರ ಮಂಜುನಾಥ್, ಒಟ್ಟು ಎಂಟು ಮೇಕೆಗಳಿದ್ದು, ಅದರಲ್ಲಿ ಮೂರು ಸಣ್ಣ ಮರಿಗಳು, ಎರಡು ದೊಡ್ಡ ಮೇಕೆಗಳನ್ನು ಕತ್ತಲೆಯಲ್ಲಿ ಕಟ್ಟಲಾಗಿತ್ತು. ಮಧ್ಯರಾತ್ರಿ ಎರಡು ಗಂಟೆಯ ನಂತರ ಮನೆ ಬಾಗಿಲಿಗೆ ಚಿಲಕ ಹಾಕಿ ಮೂರು ಮೇಕೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು, ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಖದೀಮರು ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಜಿಂಕೆಯನ್ನು ಸಾಕಿದ್ದ ವ್ಯಕ್ತಿಯ ಮನೆ ಮೇಲೆ ಅರಣ್ಯ ಸಿಬ್ಬಂದಿ ದಾಳಿ