ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಉಲ್ಬಣವಾಗುತ್ತಿವೆ. ಪರಿಸ್ಥಿತಿ ಹೀಗಿದ್ದರೂ ಕೂಡ ಜನರು ಮಾಸ್ಕ್ ಹಾಗು ಸಾಮಾಜಿಕ ಅಂತರವನ್ನು ಮರೆತು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ ಪಿ ಹನುಮಂತರಾಯ ಅವರು ಇಂದು ಬೆಳಗ್ಗೆ ತರಕಾರಿ ಮಾರುಕಟ್ಟೆಯಲ್ಲಿ ಮಾಸ್ಕ್ ಅಭಿಯಾನ ನಡೆಸಿದರು. ತಹಶೀಲ್ದಾರ್ ಗಿರೀಶ್ ಲಾಠಿ ಹಿಡಿದು ಮಾರುಕಟ್ಟೆಯಲ್ಲಿ ಸುತ್ತಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.
ತಹಶೀಲ್ದಾರ್ ಕಚೇರಿ ಬಳಿ ಮಾಸ್ಕ್ ಹಾಕದೆ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗೆ ಮಾಸ್ಕ್ ಹಾಕುವಂತೆ ಮನವಿ ಮಾಡಿ ದಂಡ ಕಟ್ಟುವಂತೆ ತಿಳಿಸಿದರು. ವ್ಯಾಪಾರಿ ಮಾತ್ರ ವಾಗ್ವಾದಕ್ಕೆ ಇಳಿದಿದ್ದು, ಆ ವ್ಯಕ್ತಿಗೆ ಎಸ್ಪಿ ಹನುಮಂತರಾಯ ಕಪಾಳಮೋಕ್ಷ ಮಾಡಿ ಬಳಿಕ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಬಳಿಕ ಮಾಸ್ಕ್ ಹಾಕಿಕೊಳ್ಳದೆ ವ್ಯಾಪಾರ ಮಾಡುತ್ತಿದ್ದ ಕೆಲವರಿಗೆ ಖಡಕ್ ಎಚ್ಚರಿಕೆ ನೀಡಿ ಬಿಸಿ ಮುಟ್ಟಿಸಿದರು. ಪಾಲಿಕೆ ಅಧಿಕಾರಿಗಳು ಮಾಸ್ಕ್ ಹಾಕದವರಿಗೆ ದಂಡ ವಿಧಿಸಿ, ಸಾಕಷ್ಟು ಬಾರಿ ಮನವಿ ಮಾಡಿದರು ಜನರು ಮಾತ್ರ ಜಾಗೃತರಾಗುತ್ತಿಲ್ಲ. ಹಲವು ಬಾರಿ ಮಾಸ್ಕ್ ಅಭಿಯಾನ ಮಾಡಿದರು ಜನ ಮಾಸ್ಕ್ ಹಾಕಿಕೊಳ್ಳದೆ ಹೊರ ಬರುತ್ತಿರುವುದು ಜಿಲ್ಲಾಡಳಿತಕ್ಕೆ ತಲೆಬಿಸಿಯಾಗಿ ಪರಿಣಮಿಸಿದೆ.