ಹರಿಹರ: ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ ತೀವ್ರ ಸ್ವರೂಪದ ಗಾಯಗೊಂಡ ವ್ಯಕ್ತಿಗೆ ಪರಿಹಾರ ನೀಡಲು ವಿಳಂಬವಾದ ಹಿನ್ನೆಲೆಯಲ್ಲಿ ಹರಿಹರದ ಹಿರಿಯ ಸಿವಿಲ್ ನ್ಯಾಯಾಲಯ ಗದಗ ವಿಭಾಗದ ಬಸ್ ಜಪ್ತಿ ಮಾಡುವಂತೆ ಆದೇಶ ಮಾಡಿದ್ದು, ಬುಧವಾರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮುಂಡರಗಿಯಿಂದ ಬೆಂಗಳೂರು ಮಾರ್ಗದ ಬಸ್‌ವೊಂದನ್ನು ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರು ಜಪ್ತಿ ಮಾಡಿದರು.
ಘಟನೆಯ ವಿವರ: ತುಮಕೂರು ಜಿಲ್ಲೆಯ ಶಿರಾ ಪಟ್ಟಣದ ಹತ್ತಿರ 28-12-2009ರಂದು ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾದ ಪರಿಣಾಮ ನಗರದ ಲೇಬರ್ ಕಾಲೋನಿ ನಿವಾಸಿ ಅರವಿಂದ ಬಾರ್ಕಿ ಎಂಬುವವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಪರಿಹಾರಕ್ಕೆ ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಗಾಯಾಳು ಕುಟುಂಬಕ್ಕೆ 1,91,287 ರೂ. ಪರಿಹಾರ ನೀಡುವಂತೆ 21-6-2002ರಂದು ಆದೇಶಿಸಿತ್ತು. ಇಲಾಖೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ ಪರಿಣಾಮ ಪುನಃ ನ್ಯಾಯಾಲಯದ ಮೊರೆ ಹೊದಾಗ 2-03-2020ರಂದು ಪರಿಹಾರವನ್ನು ನೀಡದಿರುವ ಕಾರಣ ನ್ಯಾಯಾಲಯ ಪರಿಹಾರಕ್ಕಾಗಿ ಸಂಸ್ಥೆಯ ಆಸ್ತಿ ಜಪ್ತಿ ಮಾಡುವಂತೆ ಆದೇಶಿಸಿತ್ತು.
ಇನ್ನು ಅರ್ಜಿದಾರರ ಪರ ವಕೀಲ ಬಸವರಾಜ ಓಂಕಾರಿ ವಾದ ಮಂಡಿಸಿದ್ದರು. ನ್ಯಾಯಾಲದ ಆದೇಶದ ಮೇರೆಗೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ನ್ಯಾಯಾಲಯದ ಅಮೀನ್‌ದಾರರಾದ ಸಿದ್ದಬಸಯ್ಯ, ಬಿ.ಎಸ್. ಬಸಪ್ಪ, ಶಿವಬಸವ ಆರ್. ಬಾಗೇವಾಡಿ, ಶಿವಕುಮಾರ, ಅರವಿಂದ ಬಾರ್ಕಿ ಬಸ್ ಜಪ್ತಿ ಮಾಡಿದ್ದಾರೆ.