ದಾವಣಗೆರೆ : ಜಿಲ್ಲೆಯಲ್ಲಿ ಮಣ್ಣು ಮುಕ್ಕ ಹಾವು ಮಾರಾಟ ಜಾಲ ಇರುವ ಶಂಕೆ ವ್ಯಕ್ತವಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಲಾಡ್ಜ್‌ವೊಂದರಲ್ಲಿ ಮಣ್ಣು ಮುಕ್ಕ ಹಾವು ಸಮೇತ ನಾಲ್ವರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದರು.
ಆದರೆ, ಈ ಘಟನೆ ಮಾಸುವ ಮುನ್ನವೇ ಇದೀಗ ನಗರದ ಬೇತೂರು ರಸ್ತೆಯಲ್ಲಿ ಹಾವನ್ನು ಮಾರಾಟ ಮಾಡುತ್ತಿದ್ದವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬೇಟೆಯಾಡಿ ಹಾವನ್ನು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದ ನಿವಾಸಿ ಮಂಜಪ್ಪ ಎಂಬುವನನ್ನು ಬಂಧಿಸಲಾಗಿದೆ.
ಮೂಢನಂಬಿಕೆಯೇ ಇವರ ಬಂಡವಾಳ : ಈ ಮಣ್ಣು ಮುಕ್ಕ ಹಾವು ದೇವರ ಸಮಾನ ಎಂದು ಕೆಲವರನ್ನು ನಂಬಿಸಿ ವ್ಯವಹಾರ ಮಾಡುವ ಜಾಗದಲ್ಲಿ ಇರಿಸಿದ್ರೆ ಅವರ ಸಂಪತ್ತು ಹೆಚ್ಚಾಗುತ್ತದೆ. ಬಳಿಕ ಈ ಹಾವಿನ ಮೂಲಕ ನಿಧಿಯನ್ನು ಕೂಡ ಕಂಡು ಹಿಡಿಯಬಹುದಾಗಿದೆ ಎಂದು ಜನರನ್ನು ನಂಬಿಸುತ್ತಿದ್ದರು ಎಂದು ತಿಳಿದು ಬಂದಿದೆ. ಕೆಲವರು ಈ ಹಾವನ್ನು ಲಕ್ಷ ಹಾಗೂ ಕೋಟಿಗಟ್ಟಲೇ ಹಣ ನೀಡಿ ಖರೀದಿಸುವವರಿದ್ದಾರಂತೆ.
ಆಂಧ್ರದಲ್ಲಿ ಇದ್ದಕ್ಕಿದ್ದಂತೆ ಮೂರ್ಛೆ ಹೋದ 300 ಮಂದಿ: ಅಸ್ವಸ್ಥರು ಆಸ್ಪತ್ರೆಗೆ ದಾಖಲು
ಇದನ್ನು ಸೌಂದರ್ಯವರ್ಧಕ ಕ್ರೀಮ್ಗಳ ಉತ್ಪಾದನೆಗೆ ಬಳಸಲಾಗುತ್ತಂತೆ. ಈ ಮಣ್ಣು ಮುಕ್ಕ ಹಾವು ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳ ಕಾಡು ಹಾಗೂ ಹೊಲಗದ್ದೆಗಳಲ್ಲಿ ಕಾಣಸಿಗುತ್ತಿದ್ದು, ಎರಡೂವರೆ ಅಡಿ ಉದ್ದದ ಎರಡು ಕೆಜಿ ತೂಕ ಇದೆಯಂತೆ.
ಮಾರಾಟ ಜಾಲ ಶಂಕೆ : ಈ ಮಣ್ಣುಮುಕ್ಕ ಹಾವುಗಳು ದಾವಣಗೆರೆ ಅಕ್ಕಪಕ್ಕದ ನೆರೆಯ ಜಿಲ್ಲೆಗಳಿಗೆ ರವಾನೆಯಾಗುತ್ತಿವೆ ಎಂಬ ಶಂಕೆ ವ್ಯಕ್ತವಾಗಿದ್ದು, ಕೆಲ ವರ್ಷಗಳ ಹಿಂದೆ ಹಾವು ಮಾರಾಟದ ಆರೋಪದ ಮೇಲೆ ನಾಲ್ಕು ಜನರನ್ನು ಬೆಳಗಾವಿಯ ಸಿಐಬಿ ಘಟಕದ ಪೊಲೀಸರು ಬಂಧಿಸಿದ್ದರಂತೆ. ಈ ನಾಲ್ಕು ಜನ ಬಂಧಿತರಲ್ಲಿ ಓರ್ವ ಮಾತ್ರ ದಾವಣಗೆರೆ ನಗರದ ವಿನೋಬ ನಗರದ ನಿವಾಸಿಯಾಗಿದ್ದಾನೆ.
ಇದರಿಂದ ದಾವಣಗೆರೆಯಲ್ಲಿ ಮಣ್ಣುಮುಕ್ಕ ಹಾವು ಮಾರಾಟ ಜಾಲ ಇರಬಹುದು ಎಂಬುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಪತ್ತೆ ಹಚ್ಚಿ ಪ್ರಕರಣವನ್ನು ಬಯಲಿಗೆಳಯಬೇಕಿದೆ.