ಹರಿಹರ: ತಾಲೂಕಿನ ಹನಗವಾಡಿ ಸಮೀಪದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಲಿಂ. ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಯವರ ಪ್ರಥಮ ಸ್ಮರಣೋತ್ಸವಕ್ಕೆ ಸಹಕರಿಸಿದ ಭಕ್ತರಿಗೆ ಏರ್ಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸಮಾರಂಭದಲ್ಲಿ ಮಾತನಾಡಿದ ಅವರು, ಯಾವ ಮರದಲ್ಲಿ ಹಣ್ಣುಗಳಿರುತ್ತವೆಯೋ ಆ ಮರ ಕಲ್ಲೇಟನ್ನು ಸಹಿಸಿಕೊಳ್ಳಬೇಕಾಗುತ್ತದೆ. ಒಂದು ಮಠ ಸಮಾಜವನ್ನು ಅಭಿವೃದ್ಧಿಯ ಪಥಕ್ಕೆ ಕೊಂಡಯ್ಯುವಾಗ ಸಾಕಷ್ಟು ಟೀಕೆ, ಟಿಪ್ಪಣಿಗಳು ಬರುವುದು ಸಹಜ. ಗುರುಗಳು ಕೋಪಗೊಂಡು ಮಾತನಾಡುತ್ತಿದ್ದಾರೆಂದರೆ ಸಮಾಜದ ಹಿತಾಸಕ್ತಿಗೆಂದು ಭಕ್ತರು ಅರ್ಥ ಮಾಡಿಕೊಳ್ಳಬೇಕೆಂದರು.
ವೀರಶೈವ ಪಂಚಮಸಾಲಿ ಸಮಾಜವೇ ನನಗೆ ತಂದೆ, ತಾಯಿ ಇದ್ದ ಹಾಗೆ. ಈ ಸಮುದಾಯದ ಅಭಿವೃದ್ಧಿ ಹಾಗೂ ಮಠವನ್ನು ರಾಷ್ಟ್ರಮಟ್ಟಕ್ಕೆ ಅಭಿವೃದ್ಧಿ ಪಡಿಸಬೇಕೆಂಬ ಗುರಿ ನಮ್ಮದಾಗಿದೆ. ಜೊತೆಗೆ ಹರಿಹರ ನಗರ ರಾಜ್ಯದ ಕೇಂದ್ರ ಬಿಂದು. ಮಠಗಳ ಬೀಡು ಹಾಗೂ ಐತಿಹಾಸಿಕ ದೇಗುಲಗಳನ್ನು ಹೊಂದಿರುವಂತಹ ಪುಣ್ಯಸ್ಥಳ. ಇದು ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯಬೇಕಿದೆ ಎಂದರು.