ದಾವಣಗೆರೆ: ನಾವೇನು ಪಾಕಿಸ್ತಾನದಲ್ಲಿದ್ದಿವಾ.? ಇಲ್ಲ ಹೊರರಾಜ್ಯದಿಂದ ಬಂದವರಾ.? ಸಚಿವ ಸ್ಥಾನ ಕೊಡ್ತೇವೆ ಅಂತ ಹೇಳಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಂಪುಟದಲ್ಲಿ ಸ್ಥಾನ ನೀಡಿಲ್ಲ. ಎಲ್ಲಾ ದೊಡ್ಡ ಸಮುದಾಯಗಳಿಗೆ ಮಾತ್ರ ಮಂತ್ರಿಗಿರಿ ನೀಡಿದೆ ಎಂದು ಯಾದವ ಗುರುಪೀಠದ ಶ್ರೀ ಕೃಷ್ಣ ಯಾದವಾನಂದ ಶ್ರೀಗಳು ಬೇಸರ ವ್ಯಕ್ತಪಡಿಸಿದರು.
ನಗರದ ವಿರಕ್ತ ಮಠದಲ್ಲಿ ಯಾದವ ಸಮಾಜದ ಶ್ರೀ ಕೃಷ್ಣ ಯಾದನಾನಂದ ಸ್ವಾಮೀಜಿ ಹಾಗು ಭೋವಿ ಮಠದ ಸಿದ್ದರಾಮೇಶ್ವರ ಶ್ರೀ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಗೆ 40 ಲಕ್ಷ ಜನ ಯಾದವರು ಮತ ಹಾಕಿದ್ದಾರೆ. ಅದ್ರೂ ಶಾಸಕಿ ಪೂರ್ಣಿಮಾರಿಗೆ ಸಚಿವ ಸ್ಥಾನ ತಪ್ಪಿದೆ ಎಂದು ಅಸಮಾಧಾನ ಹೊರಹಾಕಿದರು.
ಎಲ್ಲಾ ದೊಡ್ಡ ಸಮುದಾಯಗಳಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಸಮಾಜದ ಪರ ವಿಧಾನಸೌದಲ್ಲಿ ಮಾತನಾಡುವ ಧ್ವನಿ ಇರಬೇಕಾಗಿತ್ತು ಎಂಬ ಒತ್ತಾಸೆ ಯಾದವ ಸಮಾಜದಾಗಿತ್ತು. ಬಸವಣ್ಣನ ಹೇಗೆ ಅನುಭವ ಮಂಟಪದಲ್ಲಿ ಎಲ್ಲರಿಗೂ ಅವಕಾಶ ಕಲ್ಪಿಸಿಕೊಟ್ಟಿದ್ದರೋ ಅದೇ ರೀತಿಯಲ್ಲಿ ಸಿಎಂ ಕೂಡ ಎಲ್ಲರಿಗೂ ಅವಕಾಶ ಕಲ್ಪಿಸಬೇಕಾಗಿತ್ತು. ನಾಲ್ಕು ಸಚಿವ ಸ್ಥಾನ ಇವೆ, ಅದರಲ್ಲಿ ಒಂದು ಸಚಿವ ಸ್ಥಾನವನ್ನಾದರೂ ಪೂರ್ಣಿಮಾ ಅವರಿಗೆ ನಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗೊಲ್ಲ ಸಮುದಾಯವನ್ನು ಬಿಜೆಪಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ದೊಡ್ಡ ಸಮುದಾಯಗಳಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ
ಸರ್ಕಾರ ಎಲ್ಲರನ್ನು ಒಳಗೊಂಡಿರುತ್ತದೆ. ಎಲ್ಲಾ ಸಮುದಾಯಕ್ಕೆ ಸಮಾಜಿಕ ನ್ಯಾಯದಡಿಯಲ್ಲಿ ಸಚಿವ ಸ್ಥಾನ ನೀಡಬೇಕಾಗಿತ್ತು. ಆದ್ರೆ ಬರೀ ದೊಡ್ಡ ಸಮುದಾಯಗಳಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಭೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಬೇಸರ ವ್ಯಕ್ತಪಡಿಸಿದರು. ದೊಡ್ಡ ದೊಡ್ಡ ಸಮುದಾಯಗಳಿಗೆ ಸಚಿವ ಸ್ಥಾನ ನೀಡಿ, ಅವರನ್ನು ಓಲೈಸಿ, ಚಿಕ್ಕ ಸಮುದಾಯಗಳನ್ನು ಜೀವಂತ ಶವದ ರೀತಿ ಮಾಡಿದೆ ಎಂದು ಶ್ರೀಗಳು ಕಿಡಿಕಾರಿದರು.