ದಾವಣಗೆರೆ: ನಗರ ಸ್ಮಾರ್ಟ್ ಸಿಟಿಯಾಗಿ ಬದಲಾಗುತ್ತಿದ್ದರು ಕೂಡ ಕೆಲ ಕಚೇರಿಗಳ ವ್ಯವಸ್ಥೆಗೆ ಗ್ರಹಣ ಬಡಿದಿದೆ. ಸದಾ ಸ್ಮಾರ್ಟ್ನಿಂದ ಕಂಗೊಳಿಸುತ್ತಿರುವ ನಗರ ಇದೀಗ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಕೂಗು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಿತ್ಯ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳ ನೋಂದಣಿ ಸೇರಿದಂತೆ ಹಲವು ಕೆಲಸಗಳು ನಡೆಯುತ್ತಲೇ ಇರುತ್ತವೆ. ಸಾವಿರಾರು ಜನರು ನಿತ್ಯ ಕೆಲಸ ಕಾರ್ಯಗಳಿಗೆ ಭೇಟಿ ನೀಡುತ್ತಾರೆ. ಆದರೆ, ಇಂತಹ ಕಚೇರಿಗಳಲ್ಲಿ ಮಾತ್ರ ಸರ್ವರ್ ಬ್ಯೂಜಿ ಎನ್ನುವ ಪದಗಳು ಸರ್ವೇ ಸಾಮಾನ್ಯವಾಗಿವೆ. ಅದರಲ್ಲಿ ನಗರದ ಪಿಬಿ ರಸ್ತೆಯಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಳೆದ ಒಂದು ವಾರದಿಂದ ಸರ್ವರ್ ಬ್ಯೂಜಿಯಾಗಿದ್ದು, ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಸಬ್ ರಿಜಿಸ್ಟ್ರಾರ್ ಅಧಿಕಾರಿಗಳನ್ನ ಹಾಗೂ ಸಿಬ್ಬಂದಿ ತರಾಟೆಗೆ ತಡಗೆದುಕೊಂಡರು. ಆದರೆ, ಇದಕ್ಕೆ ಮಾತ್ರ ಅಧಿಕಾರಿಗಳು ಇಡೀ ರಾಜ್ಯದಲ್ಲಿ ಸರ್ವರ್ ಡೌನ್ ಆಗಿದೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಓದಿ : ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪ್ರದೇಶದಲ್ಲಿ ಭಾರಿ ಸ್ಫೋಟಕ ಪತ್ತೆ!
ಹತ್ತು ವರ್ಷಗಳ ಹಿಂದೆ ಖಾಸಗಿ ಕಟ್ಟಡದಲ್ಲಿ ಆರಂಭವಾದ ಈ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಯಾವುದೇ ಮೂಲ ಸೌಕರ್ಯಗಳೇ ಇಲ್ಲದಂತಾಗಿದೆ. ಸರ್ವರ್ ಸಮಸ್ಯೆ ಒಂದು ಕಡೆಯಾದ್ರೇ, ತಮ್ಮ ಆಸ್ತಿ ನೋಂದಣಿ ಮಾಡಿಸಿಕೊಳ್ಳಲು ಬರುವವರು ಬೆಳಗ್ಗೆಯಿಂದ ಸಂಜೆವರೆಗೂ ಕಾದು ಕೂರಬೇಕು. ಇಲ್ಲಿ ಜನರಿಗೆ ಶೌಚಾಲಯದ ಸಮಸ್ಯೆ ಕೂಡ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇನ್ನು ಕೂರುವ ವ್ಯವಸ್ಥೆ ಇಲ್ಲದೇ ವೃದ್ದರು, ಮಕ್ಕಳು ಸೇರಿದಂತೆ ಹಲವರು ಬಿಸಿಲಿನಲ್ಲೇ ಕೂರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇಷ್ಟೆಲ್ಲ ಕಷ್ಟ ಅನುಭವಿಸಿ ರಿಜಿಸ್ಟರ್ ಮಾಡಿಸಲು ಬಂದರೆ ಅಧಿಕಾರಿಗಳು ಮಾತ್ರ ಸರ್ವರ್ ಪ್ರಾಬ್ಲಂ ಇದೆ ಎಂದು ಹೇಳಿ ವಾರಗಟ್ಟಲೇ ಅಲೆದಾಡಿಸುತ್ತಿದ್ದಾರೆ ಎಂದು ಅಧಿಕಾರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.