ದಾವಣಗೆರೆ: ಪರಿಸರ ದಿನಾಚರಣೆಯಂದು ಗಿಡ ನೆಡುವುದು ಮುಖ್ಯವಲ್ಲ. ಬದಲಾಗಿ ನೆಟ್ಟ ಗಿಡಗಳನ್ನು ಪೋಷಣೆ ಮಾಡುವುದು ಮುಖ್ಯ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಹಾನಗರ ಪಾಲಿಕೆ ವತಿಯಿಂದ ವಿದ್ಯಾನಗರ ವಿನಾಯಕ ಬಡಾವಣೆಯ ಸೌಜನ್ಯ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಮರಗಳನ್ನು ಬೆಳೆಸಿ ಉಳಿಸುವ ಕೆಲಸ ಮಾಡಬೇಕು. ನಾವೆಲ್ಲರೂ ಜೀವಿಸಲು ಹಾಗೂ ಉಸಿರಾಡಲು ಪರಿಸರ ಮುಖ್ಯ. ಪರಿಸರ ಉತ್ತಮವಾಗಿದ್ದಷ್ಟು ಆರೋಗ್ಯ ವೃದ್ಧಿಸುತ್ತದೆ. ಒಂದು ವೇಳೆ ಪರಿಸರ ಕ್ಷೀಣಿಸಿದರೆ ಭೂಮಿ ಮೇಲಿನ ಜೀವಿಗಳು ನಾಶ ಹೊಂದುತ್ತವೆ ಎಂದರು.
ಮಹಾನಗರ ಪಾಲಿಕೆ ಒಂದು ಲಕ್ಷ ಗಿಡ ನೆಡುವ ಶಪಥ ಮಾಡಿದೆ. ನಗರದ ಎಲ್ಲಾ ವಾರ್ಡ್ ಹಾಗೂ ರಸ್ತೆ ಬದಿಗಳಲ್ಲಿ ಗಿಡ ನೆಡುವ ತೀರ್ಮಾನ ಕೈಗೊಂಡಿದೆ. ಇದು ಸ್ವಾಗತಾರ್ಹ ತೀರ್ಮಾನವಾಗಿದ್ದು, ಒಂದು ಲಕ್ಷ ಗಿಡ ನೆಡುವ ಕೆಲಸ ಸಣ್ಣ ವಿಷಯವಲ್ಲ. ನೆಟ್ಟಂತಹ ಗಿಡಗಳನ್ನು ಜವಾಬ್ದಾರಿ ತೆಗೆದುಕೊಂಡು ಬೆಳೆಸಬೇಕು. ನೀರೆರೆದು ಅವುಗಳ ಪೋಷಣೆ ಮಾಡುವ ಕೆಲಸವಾಗಬೇಕು. ಗಿಡ ನೆಟ್ಟ ಬಳಿಕ ವಾರ್ಡ್‍ನ ಕಾರ್ಪೋರೇಟರ್ ಮತ್ತು ನಾಗರಿಕರು ಗಿಡಗಳ ಬಗ್ಗೆ ಕಾಳಜಿ ವಹಿಸಬೇಕು. ಆಗ ಈ ಕಾರ್ಯಕ್ರಮಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು.
ಮಹಾನಗರ ಪಾಲಿಕೆಯ ಮೇಯರ್ ಬಿ.ಜೆ.ಅಜಯ್ ಕುಮಾರ್ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಾವು ಒಂದು ವರ್ಷದ ಅವಧಿಯೊಳಗೆ ಒಂದು ಲಕ್ಷ ಗಿಡ ನೆಡುವ ಯೋಜನೆ ಹಮ್ಮಿಕೊಂಡಿದ್ದೇವೆ. ಕೇವಲ ಗಿಡ ನೆಡುವ ಕೆಲಸವಷ್ಟೇ ಅಲ್ಲ, ವಾರಕೊಮ್ಮೆ ಗಿಡಗಳ ಪರಿಶೀಲನೆ ನಡೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗಿಡ ನೆಡುವುದು ಕೇವಲ ಕಾರ್ಯಕ್ರಮಕ್ಕೆ ಹಾಗೂ ಫೋಟೋ ತೆಗಿಸಿಕೊಳ್ಳುವುದಕ್ಕೆ ಮಾತ್ರ ಸಿಮೀತವಾಗಬಾರದು. ನಾವೆಲ್ಲರೂ ಬದುಕಿ ಆರೋಗ್ಯವಾಗಿರಲು ಒಂದು ಲಕ್ಷ ಗಿಡಗಳಲ್ಲಿ ಒಂದು ಗಿಡ ಸಹ ಹಾಳಾಗದಂತೆ ನೋಡಿಕೊಳ್ಳಬೇಕು. ಮಕ್ಕಳಂತೆ ಗಿಡಗಳನ್ನು ಪಾಲನೆ ಮಾಡಬೇಕು ಎಂದರು.