ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸದಾಶಿವ ಆಯೋಗ ವರದಿ ಜಾರಿಗೆ ಬದ್ಧ ಎಂದಿರುವುದು ಸರಿಯಲ್ಲ. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿರುವ ಕಟೀಲ್ ಕೂಡಲೇ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಬಂಜಾರ ಸಮಾಜದ ಪೀಠಾಧಿಪತಿ ಸಂತ ಸೇವಾಲಾಲ್ ಸರದಾರ್ ಸ್ವಾಮೀಜಿ ಎಚ್ಚರಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಳೀನ್ ಕುಮಾರ್ ಕಟೀಲ್‌ಗೆ ಹಿಂದುಳಿದವರು, ದಲಿತರು, ಶೋಷಿತರ ಬಗ್ಗೆ ಏನು ಗೊತ್ತಿದೆ?. ಬಳ್ಳಾರಿ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಧ್ಯಯನ ಮಾಡಲಿ. ಆಮೇಲೆ ಮಾತನಾಡಲಿ ಎಂದು ಸವಾಲು ಹಾಕಿದರು.
ನಾಳೆ ಚಿತ್ರದುರ್ಗದ ಬಂಜಾರ ಸಮಾಜದ ಪೀಠದಲ್ಲಿ ಸಮಾಜದ ಮುಖಂಡರು, ಜನರ ಜೊತೆ ಸಭೆ ನಡೆಸಿ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಶಿರಾ ಹಾಗೂ ಆರ್. ಆರ್. ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಪಕ್ಷ ಕಟ್ಟುವುದನ್ನು ಬಿಟ್ಟು ಆ ಪಕ್ಷ ಮುಗಿಸುವುದಕ್ಕೆ ನಳೀನ್ ಹೊರಟಿದ್ದಾರೆ ಎಂಬುದು ಅವರ ವರ್ತನೆಯಿಂದ ಗೊತ್ತಾಗುತ್ತಿದೆ. ಯಾವುದೇ ಕಾರಣಕ್ಕೂ ಮೀಸಲಾತಿ ಸಂಬಂಧ ರಾಜ್ಯ ಸರ್ಕಾರಕ್ಕೆ ಸದಾಶಿವ ಆಯೋಗ ನೀಡಿರುವ ವರದಿ ಜಾರಿಗೊಳಿಸಬಾರದು. ಇದು ಜಾರಿಯಾದರೆ ಜಾತಿ- ಜಾತಿಗಳ ಮಧ್ಯೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. ನಮಗೆ ಈಗ ನೀಡುತ್ತಿರುವ ಮೀಸಲಾತಿಯನ್ನು ಹೆಚ್ಚಿಸುವ ಬದಲು ನಮ್ಮ ನಮ್ಮಲ್ಲೇ ಜಗಳ ಹಚ್ಚುವ ಕೆಲಸ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.