ದಾವಣಗೆರೆ: ಕೋವಿಡ್ ಆರ್ಭಟ ತಗ್ಗಿಸಲು ಮುಂದಾದ ವಿದ್ಯಾರ್ಥಿನಿ! - davanagere covid news
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಶತಪ್ರಯತ್ನ ನಡೆಯುತ್ತಿದೆ. ಇದ್ರ ನಡುವೆ ವಿದ್ಯಾರ್ಥಿಗಳು ಸ್ಯಾನಿಟೈಸಿಂಗ್ ಮೂಲಕ ಇಡೀ ನಗರವನ್ನೇ ಸ್ವಚ್ಛಗೊಳಿಸುವ ಪಣ ತೊಟ್ಟಿದ್ದಾರೆ.

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ಕೋವಿಡ್ ಆರ್ಭಟ ಮುಂದುವರೆದಿದ್ದು, ಇದ್ರ ನಿಯಂತ್ರಣಕ್ಕೆ ನಾನಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅದರಂತೆ ಇಲ್ಲಿ ವಿದ್ಯಾರ್ಥಿನಿಯೋರ್ವಳು ಸಮಾಜಮುಖಿ ಕೆಲಸ ಮಾಡುತ್ತಾ ಇಡೀ ನಗರವನ್ನೇ ಸ್ವಚ್ಛಗೊಳಿಸುವ ಪಣ ತೊಟ್ಟಿದ್ದಾಳೆ.
ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ನ ನಿವಾಸಿಗಳಾದ ಸೌಜನ್ಯ ಹಾಗೂ ರುದ್ರೇಶ್ ಬೆಳಗ್ಗೆ ಎದ್ದ ತಕ್ಷಣ ಜನಸಂದಣಿ ಸೇರುವ ಜಾಗಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡುವ ಕೆಲಸವನ್ನು ಮಾಡಿದ್ದಾರೆ. ಮೊದಲು ಈ ಕೆಲಸವನ್ನು ವಿದ್ಯಾರ್ಥಿ ರುದ್ರೇಶ್ ಮಾಡಿದ್ದು, ಇದೀಗ ವಿದ್ಯಾರ್ಥಿನಿ ಸೌಜನ್ಯ ಮುಂದುವರೆಸಿದ್ದಾರೆ.
ಲಾಕ್ಡೌನ್ ಆದಾಗಿನಿಂದ ಮನೆಯಲ್ಲಿ ಕೂತು ಕಾಲ ಕಳೆಯುವ ಬದಲು ಪ್ರತಿದಿನ ಒಂದೊಂದು ಪ್ರದೇಶವನ್ನು ಸ್ಯಾನಿಟೈಸ್ ಮಾಡಿದರೆ ಕೋವಿಡ್ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಜತೆಗೆ ಇಡೀ ಜಿಲ್ಲೆಯನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಬಹುದೆಂದು ಪ್ರತಿ ಸಾರ್ವಜನಿಕ ಸ್ಥಳಗಳನ್ನು ಸ್ಯಾನಿಟೈಸ್ ಮಾಡುತ್ತಿದ್ದಾರೆ.
ಡೆಟಾಲ್ ಹಾಗೂ ಸೋಡಿಯಂ ಹೈಪ್ಲೋಕ್ಲೂರೈಡ್ ಮಿಶ್ರಿಣ ಮಾಡಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ದಾವಣಗೆರೆ ನಗರದಲ್ಲಿ ಪ್ರತಿನಿತ್ಯ ಒಂದೊಂದು ಸ್ಥಳದಲ್ಲಿ ಸ್ಯಾನಿಟೈಸ್ ಮಾಡುತ್ತಿದ್ದನ್ನು ಕಂಡು ಕೆಲವರು ಗೇಲಿ ಮಾಡಿದ್ರೂ ಕೂಡ ಅದನ್ನು ತಲೆಗೆ ಹಾಕಿಕೊಳ್ಳದೆ ವಿದ್ಯಾರ್ಥಿನಿ ಸೌಜನ್ಯ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ.
ಇನ್ನು ಇತಂಹ ಕರಾಳ ಪರಿಸ್ಥಿತಿಯಲ್ಲಿ ಜನರು ಮನೆಯಿಂದ ಹೊರ ಬರಲು ಹೆದರುತ್ತಾರೆ. ಆದ್ರೆ ಸೌಜನ್ಯ ಮಾತ್ರ ಯಾವುದಕ್ಕೂ ಭಯ ಪಡದೇ ಸಾರ್ವಜನಿಕ ಪ್ರದೇಶಗಳಲ್ಲಿ ಸ್ಯಾನಿಟೈಸ್ ಮಾಡುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಇವರ ಪೋಷಕರೇ ಸ್ಫೂರ್ತಿ. ಸೌಜನ್ಯಳ ಈ ಕಾರ್ಯಕ್ಕೆ ಪೋಷಕರು ಬೆನ್ನೆಲುಬಾಗಿ ನಿಂತಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ 3.O: ಸಂಜೆ ಸಿಎಂ ನೇತೃತ್ವದಲ್ಲಿ ಸಚಿವರು, ಅಧಿಕಾರಿಗಳ ಮಹತ್ವದ ಸಭೆ
ಯುವಜನತೆ ಕೇವಲ ಮೋಜು ಮಸ್ತಿ ಎಂದು ಕಾಲ ಕಳೆಯುತ್ತಿರುತ್ತಾರೆ ಎನ್ನುವ ಮಾತನ್ನು ಈ ವಿದ್ಯಾರ್ಥಿಗಳು ಸುಳ್ಳು ಮಾಡಿದ್ದಾರೆ. ಯುವಜನತೆ ಮನಸ್ಸು ಮಾಡಿದ್ರೆ ಏನು ಬೇಕಾದರೂ ಸಾಧಿಸಬಹುದು ಹಾಗೂ ಪರಿಸರದ ರಕ್ಷಣೆಗೆ ಪಣ ತೊಟ್ಟು ನಿಲ್ಲಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.