ದಾವಣಗೆರೆ: ಶಾಸಕ ಎಸ್. ಎ. ರವೀಂದ್ರನಾಥ್ ಮೊಮ್ಮಗ ಪ್ರಯಾಣಿಸುತ್ತಿದ್ದ ಕಾರು ಕಂಬಕ್ಕೆ ಡಿಕ್ಕಿ ಹೊಡೆದ ಬಳಿಕ ಮನೆಗೆ ನುಗ್ಗಿದ ಘಟನೆ ನಗರದ ಶಾಮನೂರು ಬಳಿ ನಡೆದಿದ್ದು, ಅದೃಷ್ಟವಶಾತ್ ಭಾರೀ ದುರಂತವೊಂದು ತಪ್ಪಿದೆ.
ಜಿಲ್ಲೆಯ ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಎ. ರವೀಂದ್ರನಾಥ್ ಪುತ್ರಿ ಪಾಲಿಕೆ ಸದಸ್ಯೆ ವೀಣಾ ನಂಜಪ್ಪ ಪುತ್ರ ಅರುಣ್ ಕುಮಾರ್ ಅವರಿದ್ದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಮನೆ ಕಟ್ಟೆ ಮೇಲಿದ್ದವರು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.
ಅಪಘಾತವಾದ ವೇಳೆ ಸ್ಥಳೀಯರ ಜೊತೆ ಅರುಣ್ ಕುಮಾರ್ ಮಾತಿನ ಚಕಮಕಿ ನಡೆಸಿದ್ದಾರೆ. ಆಗ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಕಾರು ಬಿಟ್ಟು ಅರುಣ್ಕುಮಾರ್ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಕಾರಿನಲ್ಲಿ ಶಾಸಕರ ಪಾಸ್ ಪತ್ತೆಯಾಗಿದ್ದು, ಅಪಘಾತದ ಬಳಿಕ ಏನಾಗಿದೆ ಎಂದು ಕೇಳುವ ಸೌಜನ್ಯ ಇಲ್ಲದಿದ್ದರೆ ಹೇಗೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಅರುಣ್ ಕುಮಾರ್ ಅವರನ್ನ ಕರೆಸುವಂತೆ ಆಗ್ರಹಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.