ದಾವಣಗೆರೆ: ವಂಚನೆ ಪ್ರಕರಣವೊಂದರಲ್ಲಿ ಪೊಲೀಸರ ವಶದಲ್ಲಿದ್ದ ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಅನುಮಾನಾಸ್ಪದ ಸಾವು ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಎಸ್ಪಿ ಅರುಣ್ ಮಾಹಿತಿ ನೀಡಿದ್ದಾರೆ. ಪೊಲೀಸ್ ವಶದಲ್ಲಿದ್ದಾಗಲೇ ಆರೋಪಿ ಫ್ಲೈ ಓವರ್ ಮೇಲಿಂದ ಜಿಗಿದು ಸಾವನ್ನಪ್ಪಿದ್ದು, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಗಾಂಧಿನಗರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಕೃಷ್ಣಪ್ಪ ಹಾಗೂ ಕಾನ್‌ಸ್ಟೆಬಲ್ ದೇವರಾಜ್ರನ್ನು ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಿವೇಶನಗಳ ನಕಲಿ ದಾಖಲೆ ಸೃಷ್ಠಿಸಿ ತಮ್ಮ ಹೆಸರಿಗೆ ನೋಂದಣಿ ಮಾಡಿದ ಆರೋಪ ಹರೀಶ್ ಮೇಲಿತ್ತು. ಪ್ರಕರಣದ ವಿಚಾರಣೆ ನಡೆಸಲು ಭಾನುವಾರ ತಡರಾತ್ರಿ ಕಾಕನೂರಿನಲ್ಲಿ ಪೊಲೀಸರು ಹರೀಶ್ಅವರನ್ನು ವಶಕ್ಕೆ ಪಡೆದಿದ್ದರು. ಕಾರಿನಲ್ಲಿ ದಾವಣಗೆರೆಗೆ ಕರೆದುಕೊಂಡು ಬರುವಾಗ ದಾವಣಗೆರೆ ತಾಲೂಕಿನ ತೋಳಹುಣಸೆ ಬಳಿ ಹರೀಶ್ ತಪ್ಪಿಸಿಕೊಳ್ಳಲು ಮೇಲ್ಸೇತುವೆಯಿಂದ ಹಾರಿದ್ದು ತೀವ್ರ ಸ್ವರೂಪದ ಗಾಯಗಳಾಗಿ ಕೊನೆಯುಸಿರೆಳೆದಿದ್ದರು.
ಹೀಗಾಗಿ ಹರೀಶ್ ಪತ್ನಿ ಪತಿಯನ್ನು ಪೊಲೀಸರೇ ಕೊಲೆ ಮಾಡಿದ್ದಾರೆ ಎಂದು ದೂರು ದಾಖಲು ಮಾಡಿದ್ದರು. ಆದ್ದರಿಂದ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಡಿವೈಎಸ್ಪಿ ನೇತೃತ್ವದ ಸಿಐಡಿ ತಂಡದಿಂದ ಪ್ರಕರಣ ತನಿಖೆ ಆರಂಭವಾಗಿದೆ. ಸಿಐಡಿಯ ನಾಲ್ವರ ಸದಸ್ಯರ ತಂಡ ನಿನ್ನೆ (ಸೋಮವಾರ) ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಕ್ಷ್ಯಾಧಾರ ಕಲೆ ಹಾಕಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ, 6 ಆರೋಪಿಗಳ ಬಂಧನ: ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತ ರವಿ ತಲೆ ಎಂಬವರ ಮೇಲೆ ಸೈಜುಗಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ನಂದಿನಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ವೃತ್ತಿಯಲ್ಲಿ ಟೆಂಪೋ ಟ್ರಾವೆಲ್ಲರ್ ಚಾಲಕ ಹಾಗೂ ಮೇಕೆ ಸಾಕಾಣಿಕೆದಾರನಾಗಿದ್ದ ರವಿ ಘಟನೆಯ ದಿನ ಸಂಜೆ ಕೆಲಸ ಮುಗಿಸಿ ಮನೆ ಹತ್ತಿರ ಬಂದಿದ್ದರು. ಸಿಎಂಎಚ್ ಬಾರ್ಗೆ ಬಂದು ಮದ್ಯ ಸೇವಿಸಿ ಕೃಷ್ಣ ಮೂರ್ತಿ ಎಂಬ ಮತ್ತೋರ್ವ ಕಾಂಗ್ರೆಸ್ ಮುಖಂಡನ ಬರ್ತ್ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಪಾರ್ಟಿಯಲ್ಲಿ ರವಿ ಹಾಗೂ ಆರೋಪಿಗಳ ನಡುವೆ ಗಲಾಟೆ ನಡೆದಿದೆ.
ಆರೋಪಿಗಳಾದ ಮಂಜ ಮತ್ತು ಸ್ಪಾಟ್ ನಾಗ ರವಿಗೆ ಬಲವಾಗಿ ಹೊಡೆದಿದ್ದಾರೆ. ಸಿಟ್ಟಿಗೆದ್ದ ರವಿ 'ನಿಮ್ಮನ್ನು ಬಿಡೋದಿಲ್ಲ' ಎಂದು ಬೆದರಿಕೆ ಹಾಕಿದ್ದರಂತೆ. ರವಿಯನ್ನು ಬಿಟ್ಟರೆ ತಮಗೆ ಕಂಟಕ ಎಂದು ಭಾವಿಸಿದ್ದ ಆರೋಪಿಗಳು, ಆತ ಮನೆಗೆ ತೆರಳುವುದನ್ನೇ ಹೊಂಚು ಹಾಕಿ ಕಾದು ಕುಳಿತಿದ್ದರು. ಆ ಬಳಿಕ ಬೈಕುಗಳಲ್ಲಿ ಅಟ್ಟಾಡಿಸಿಕೊಂಡು ಬಂದು ಹಲ್ಲೆ ಮಾಡಿದ್ದರು. ಕೊನೆಗೆ ಹಳ್ಳಿರುಚಿ ಹೊಟೇಲ್ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆಯ ಮೇಲೆ ಸೈಜುಗಲ್ಲು ಎತ್ತಿ ಹಾಕಿ ಹತ್ಯೆಗೈದು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ನಂದಿನಿ ಲೇಔಟ್ ಠಾಣಾ ಪೊಲೀಸರು ಸದ್ಯ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ, ಕೊಲೆ ಅಪರಾಧಿಗೆ 15 ದಿನಗಳಲ್ಲೇ ಮರಣದಂಡನೆ ವಿಧಿಸಿದ ಮಥುರಾ ಕೋರ್ಟ್...!