ದಾವಣಗೆರೆ : ಕಡುಬಡನತದಲ್ಲಿ ಬೆಳೆದು ಉತ್ತಮ ವಿದ್ಯಾಭ್ಯಾಸ ಮಾಡಿ ವಿಶೇಷಚೇತನ ವ್ಯಕ್ತಿ ಸರ್ಕಾರಿ ಕೆಲಸ ಪಡೆದಿದ್ದಾರೆ. ಕೆಲಸ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಆದರೆ, ಭೂ ಕಂದಾಯ ಇಲಾಖೆ ಅಧಿಕಾರಿಗಳು ಕೋರ್ಟ್ ಆದೇಶಕ್ಕೆ ಬೆಲೆ ಕೊಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ರೆಡ್ಡಿಹಳ್ಳಿ ನಿವಾಸಿಯಾದ ವಿಶೇಷಚೇತನ ನಾಗರಾಜ್ ಪದವಿ ಪಡೆದಿದ್ದಾರೆ. ಕೆಲಸ ಇಲ್ಲದೆ ಸಾಕಷ್ಟು ಕಷ್ಟಪಟ್ಟು ಭೂ ಕಂದಾಯ ಇಲಾಖೆಯಲ್ಲಿ 2016ರಲ್ಲಿ ವಿಕಲಚೇತನರಿಗೆ ಮಾತ್ರ ಕರೆದಿದ್ದ ಸರ್ವೆಯರ್ ಕೆಲಸಕ್ಕೆ ಅರ್ಜಿ ಹಾಕಿದ್ದರು. ನೇಮಕಾತಿಯಲ್ಲಿ ಅಕ್ರಮ ಹಾಗೂ ಸುಳ್ಳು ದಾಖಲೆ ನೀಡಿ ಕೆಲಸಕ್ಕೆ ಸೇರಿದ್ದರಿಂದ ಇವರಿಗೆ ಈ ಕೆಲಸ ಕೈ ತಪ್ಪಿತ್ತು ಎಂದು ಆರೋಪಿಸಲಾಗಿದೆ.
ಇದರ ಬೆನ್ನಲ್ಲೆ ನಾಗರಾಜ್ ಸೇರಿದಂತೆ ಇನ್ನು ನಾಲ್ಕು ಜನರು ಆರ್ಟಿಐಯಲ್ಲಿ ಮಾಹಿತಿ ಕೇಳುವ ಮೂಲಕ ಅಂಗವಿಕಲರ ನ್ಯಾಯಾಲಯದಲ್ಲಿ ಮೊಕದ್ದಮ್ಮೆ ಹೂಡಿದ್ದರು. ನ್ಯಾಯಾಲಯದ ಆದೇಶದಂತೆ ತನಿಖೆ ನಡೆಸಿದ ಬಳಿಕ ಸುಳ್ಳು ದಾಖಲೆ ನೀಡಿ ಕೆಲಸಕ್ಕೆ ಆಯ್ಕೆಯಾಗಿದ್ದ ಐದು ಜನರಿಗೆ ಬೆಂಗಳೂರಿನಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಅಂಗವಿಕಲತೆ ಪ್ರಮಾಣ ಕಡಿಮೆ ಇದ್ದ ಐದು ಜನರನ್ನು ಕೆಲಸದಿಂದ ತೆಗೆದು ನಾಗರಾಜ್ ಸೇರಿದಂತೆ ಉಳಿದ ನಾಲ್ಕು ಜನರಿಗೆ ಕೆಲಸ ನೀಡಿ ಎಂದು ನ್ಯಾಯಾಲಯ ಕಂದಾಯ ಇಲಾಖೆಗೆ ಆದೇಶಿಸಿತ್ತು.
ಇನ್ನು, ಸರ್ಕಾರದಿಂದ ಆದೇಶ ಆಗಿ ಎರಡು ತಿಂಗಳುಗಳೇ ಉರುಳಿದೆ. ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಕೆಲಸ ಕೊಡಿ ಎಂದು ಕೇಳಿದರೆ ನಾಳೆ, ನಾಡಿದ್ದು ಎಂದು ಬೇಜವಾಬ್ದಾರಿ ಉತ್ತರಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ನ್ಯಾಯಾಲಯ ಆದೇಶ ನೀಡಿದ್ರೂ ಕೆಲಸ ನೀಡದೆ ಕಂದಾಯ ಇಲಾಖೆ ವಿರುದ್ಧ ಬೇಸತ್ತು ಐದು ಜನರ ಪೈಕಿ ಕೋಲಾರ ಮೂಲದರೊಬ್ಬರು ಕೊರಗಿ ಸಾವನಪ್ಪಿದ್ದರಂತೆ. ಮನೆಯಲ್ಲಿ ಬಡತನ ಇದೆ. ನಿತ್ಯ ಕೆಲಸ ನೀಡಿ ಎಂದು ಈ ವಿಶೆಷಚೇತನ ಅಲೆದಾಡುತ್ತಿದ್ದರೂ ಅಧಿಕಾರಿಗಳ ಮನಸ್ಸು ಕರುಗುತ್ತಿಲ್ಲ.