ದಾವಣಗೆರೆ: ಕೊರೊನಾ 2ನೇ ಅಲೆ ತನ್ನ ಅಟ್ಟಹಾಸ ಮೆರೆಯುತ್ತಿರುವ ಸಂದರ್ಭದಲ್ಲಿ ಶಾಸಕ ರೇಣುಕಾಚಾರ್ಯ ಸದ್ದಿಲ್ಲದೆ ಜನರ ಸೇವೆ ಮಾಡುತ್ತಿದ್ದಾರೆ. ಕೆಲ ಶಾಸಕರಂತೆ ಮನೆಯಲ್ಲೇ ಕಾಲ ಕಳೆಯದೆ ಇಡೀ ದೇಶವೇ ಹಿಂದಿರುಗಿ ನೋಡುವಂತೆ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ, ಸೋಂಕಿತರಿಗೆ ಧೈರ್ಯ ತುಂಬುತ್ತಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಇದೀಗ ಇಡೀ ರಾಜ್ಯ, ದೇಶದಲ್ಲಿ ತಮ್ಮ ಸೇವೆಯ ಮೂಲಕ ಸುದ್ದಿಯಲ್ಲಿದ್ದಾರೆ. ಸದ್ದಿಲ್ಲದೆ ಸೋಂಕಿತರ ಸೇವೆಯನ್ನು ಮಾಡುತ್ತಾ, ಇಡೀ ದೇಶವೇ ಹಿಂದಿರುಗಿ ನೋಡುವಂತೆ ಮಾಡಿದ್ದಾರೆ.
ಕೊರೊನಾ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ: ಕೊರೊನಾ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರು ತಮ್ಮ ಕ್ಷೇತ್ರದ ಜನರ ರಕ್ಷಣೆಗೆ ನಿಂತಿದ್ದು, ಮತದಾರರ ಋಣವನ್ನು ತೀರಿಸುತ್ತಿದ್ದಾರೆ. ಸೋಂಕಿತರಿಗೆ ಅವಶ್ಯಕತೆ ಇರುವ ಆಕ್ಸಿಜನ್, ಬೆಡ್ಗಳ ವ್ಯವಸ್ಥೆ ಮಾಡುತ್ತಿದ್ದಾರೆ. ಇದಲ್ಲದೆ ಕೋವಿಡ್ ವಾರ್ಡ್ಗೆ ತೆರಳಿ ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.
ರಸಮಂಜರಿ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ಸ್: ಸೋಂಕಿತರ ಭಯವನ್ನು ದೂರ ಮಾಡಲು ರಸಮಂಜರಿ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿ ರಂಜಿಸುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ಆ್ಯಂಬುಲೆನ್ಸ್ ಹಾಗು ಸೋಂಕಿತರಿಗೆ ರುಚಿಯಾದ ಊಟವನ್ನು ತಯಾರಿಸಿ ತಾವೇ ಬಡಿಸುತ್ತಾ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಹಾಕಿಸುವ ಪ್ರಯತ್ನದಲ್ಲಿದ್ದಾರೆ.
ಆಹಾರದ ಗುಣಮಟ್ಟ ಪರಿಶೀಲಿಸಿದ ಏಕೈಕ ಶಾಸಕ: ಅಲ್ಲದೇ, ಮೂರು ದಿನಗಳ ಕಾಲ ಕೋವಿಡ್ ಕೇರ್ ಸೆಂಟರ್ನಲ್ಲಿ ವಾಸ್ತವ್ಯ ಹೂಡಿ ಆಹಾರದ ಗುಣಮಟ್ಟ ಪರಿಶೀಲಿಸಿದ ಏಕೈಕ ಶಾಸಕ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಕೆಲವೊಮ್ಮೆ ಆ್ಯಂಬುಲೆನ್ಸ್ ಚಾಲಕರಾಗಿ ಮೃತ ಸೋಂಕಿತರ ದೇಹ ಹೊತ್ತು ಶವಸಂಸ್ಕಾರದಲ್ಲಿ ಭಾಗಿಯಾಗಿ ಸಂಬಂಧಿಕರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ದಿನನಿತ್ಯ ಯೋಗಾಸನ: ತಮ್ಮ ಮತದಾರರ ಋಣ ತೀರಿಸುವ ಕೆಲಸ ಮಾಡುತ್ತಿರುವ ಶಾಸಕ ರೇಣುಕಾಚಾರ್ಯ ಚಪಾತಿ ಉಜ್ಜಿ ಸೋಂಕಿತರಿಗೆ ನೀಡಿದ್ದು ಕೂಡ ವಿಶೇಷ. ಇದಲ್ಲದೆ ಸೋಂಕಿತರು ಆರೋಗ್ಯವಾಗಿರಬೇಕೆಂದು ಸಿಸಿಸಿಗಳಲ್ಲಿ ದಿನನಿತ್ಯ ಯೋಗಾಸನ ಮಾಡಿಸಿರುವುದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿತ್ತು.
ಶಾಸಕರ ಸೇವೆ ನೋಡಿ ಸಲಾಂ ಹೇಳಿದ ಹಿಂದಿ ಕಿರುತೆರೆ ನಟ: ಶಾಸಕ ಎಂ.ಪಿ. ರೇಣುಕಾಚಾರ್ಯರ ಅವರ ಈ ಸೇವೆಯನ್ನು ನೋಡಿರುವ ಹಿಂದಿ ಧಾರಾವಾಹಿ ನಟ ರೂಶಾದ್ ರಾಣಾ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಜನಪ್ರತಿನಿಧಿಗಳಿಗೆ ಮಾದರಿ ಎಂದು ಹಾಡಿ ಹೊಗಳಿದ್ದಾರೆ.
ಒಟ್ಟಾರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಸಕ ರೇಣುಕಾಚಾರ್ಯ ತಮ್ಮ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಸಂಚರಿಸುತ್ತಿದ್ದು, ಅವರ ಈ ಕಾರ್ಯಕ್ಕೆ ರಾಷ್ಟ್ರೀಯ ಬಿಜೆಪಿ ನಾಯಕರು ಶಹಭಾಶ್ಗಿರಿ ನೀಡಿದ್ದಾರೆ.
ಕೇವಲ ಚುನಾವಣೆ ಸಂದರ್ಭದಲ್ಲಿ ಜನರ ಮನೆಗಳಿಗೆ ತೆರಳಿ ಮತಭಿಕ್ಷೆ ಬೇಡುವ ರಾಜಕರಾಣಿಗಳ ಮಧ್ಯೆ ರೇಣುಕಾಚಾರ್ಯ ಅವರು ಸದಾ ಜನರೊಂದಿಗೆ ಒಡನಾಟು ಇಟ್ಟುಕೊಂಡು, ಅವರ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ.