ದಾವಣಗೆರೆ: ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಸಹೋದರ ಪುತ್ರ ಚಂದ್ರಶೇಖರ್ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಸುಳಿವು ಸಿಗದಂತಾಗಿದೆ. ಇದರಿಂದ ಶಾಸಕ ಎಂ ಪಿ ರೇಣುಕಾಚಾರ್ಯ ತಮ್ಮ ಸಹೋದರನ ಮಗನನ್ನು ನೆನೆದು, ಚಂದ್ರು ಎಲ್ಲಿದ್ದಿಯೋ ಬಾರೋ ಎಂದು ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ಬಹಳ ಅಧ್ಯಾತ್ಮಿಕತೆಗೆ ಹೆಚ್ಚು ಒತ್ತು ನೀಡುತ್ತಿದ್ದ ಚಂದ್ರಶೇಖರ್ ಭಾನುವಾರ ಸಂಜೆ ಆರು ಗಂಟೆಗೆ ಶಿವಮೊಗ್ಗ ಜಿಲ್ಲೆಯ ಗೌರಿಗದ್ದೆಗೆ ಆಗಮಿಸಿದ್ದ ವಿನಯ್ ಗುರೂಜಿಯವರನ್ನು ಸ್ನೇಹಿತ ಕಿರಣ್ ರೊಂದಿಗೆ ಭೇಟಿ ಮಾಡಿ ಕೆಲವರಿಗೆ ಊಟ ಬಡಿಸಿದ್ದಾನೆ. ಅದಾದ ಬಳಿಕ ಶಿವಮೊಗ್ಗದಿಂದ ಹಿಂದಿರುಗಿದ ಚಂದ್ರು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿಗೆ ಎಂಟ್ರಿ ಆಗಿದ್ದೇ ಕೊನೆ ಇಲ್ಲಿತನಕ ಚಂದ್ರಶೇಖರ್ ಕಾರು ಸಮೇತ ನಾಪತ್ತೆಯಾಗಿದ್ದಾನೆ. ಇನ್ನು ಪೊಲೀಸರು ಕುಟುಂಬಸ್ಥರು ಕೂಡ ಸಾಕಷ್ಟು ಹುಡುಕಾಟ ನಡೆಸುತ್ತಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಶಾಸಕ ರೇಣುಕಾಚಾರ್ಯ ಬಿಕ್ಕಿ ಬಿಕ್ಕಿ ಅತ್ತರು.
ಇನ್ನು ತನ್ನ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದ ಚಂದ್ರು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ಕುಟುಂಬಸ್ಥರನ್ನು ಆತಂಕಕ್ಕೆ ದೂಡಿದೆ. ಇನ್ನು ಚಂದ್ರಶೇಖರ್ ತಂದೆ ರಮೇಶ್ ತಲೆ ಮೇಲೆ ಕೈ ಹೊತ್ತು ಕೂತಿರುವ ದೃಶ್ಯಗಳು ಮನಸ್ಸಿಗೆ ರಾಚುವಂತ್ತಿತ್ತು.
ನಾಪತ್ತೆಯಾದ ಚಂದ್ರು ಭೇಟಿ ನೀಡಿದ್ದು ಎಲ್ಲಿ ?: ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ಚಂದ್ರಶೇಖರ್ ಕಾರು ಪಾಸ್ ಆಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭಾನುವಾರ ರಾತ್ರಿ 11.56ಕ್ಕೆ ಶಿವಮೊಗ್ಗದಿಂದ ವಾಹನ ಪಾಸ್ ಆಗಿದ್ದು, ಸೋಮವಾರ ಬೆಳಗ್ಗೆ 6.48 ಮೊಬೈಲ್ ಫೋನ್ ಲಾಸ್ಟ್ ಲೊಕೇಶನ್ ತೋರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದಾವಣಗೆರೆ ಪೊಲೀಸರಿಂದ ತೀವ್ರ ತಪಾಸಣೆ ಕಾರ್ಯ ಮುಂದುವರೆದಿದ್ದು, ಚಂದ್ರಶೇಖರ್ ಅವರು ಚಲಾಯಿಸುತ್ತಿದ್ದ ಕ್ರೇಟಾ ಕಾರು ಸಹ ಇದುವರೆಗೂ ಪತ್ತೆಯಾಗದೇ ಇರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ.
ಇನ್ನು ತಮ್ಮ ನಾಯಕನಿಗೆ ಸಮಾಧಾನ ಮಾಡಲು ಎಂ ಪಿ ರೇಣುಕಾಚಾರ್ಯ ಅವರ ನಿವಾಸಕ್ಕೆ ಅಪಾರ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸುತ್ತಿದ್ದು, ka 17 ma 2534 craeta ಕಾರು ಚಂದ್ರಶೇಖರ್ ಮೊಬೈಲ್ ಸಂಖ್ಯೆ 8792667691 ಇದಾಗಿದ್ದು, ಇದುವರೆಗೂ ಸ್ವಿಚ್ಡ್ ಆಪ್ ಆಗಿದೆ.
ಓದಿ : ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ: ಕುಟುಂಬಸ್ಥರಲ್ಲಿ ಆತಂಕ