ದಾವಣಗೆರೆ: ರಾಜಾಹುಲಿ ರಾಜಾಹುಲಿಯೊಂದಿಗೆ ಬೇಟೆ ಆಡುತ್ತೆ. ಹುಲಿ ಹುಲಿಯೊಂದಿಗೆ ಬೇಟೆ ಆಡುತ್ತದೆ, ವಿನಃ ಇಲಿ ಹೆಗ್ಗಣಗಳೊಂದಿಗೆ ಬೇಟೆ ಆಡುವುದಿಲ್ಲ. ಅದರ ಬಗ್ಗೆ ಯೋಚನೆ ಕೂಡ ಮಾಡುವುದಿಲ್ಲ ಎಂದು ಹೇಳುವ ಮೂಲಕ ಶಾಸಕ ಯತ್ನಾಳ್ಗೆ ಹರಿಹರ ಪಂಚಮಸಾಲಿ ಗುರುಪೀಠಾಧ್ಯಕ್ಷರಾದ ವಚನಾನಂದ ಶ್ರೀ ಟಾಂಗ್ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಪಂಚಮಸಾಲಿ ಪೀಠದಲ್ಲಿ ಮಾತನಾಡಿದ ಅವರು, ಎಲ್ಲ ಲಿಂಗಾಯತರು ಒಂದಾಗಬೇಕಾಗಿದೆ. ಬಸವಣ್ಣನವರ ವಿಚಾರಧಾರೆಗಳು ಪ್ರಸಾರ ಆಗ್ಬೇಕಾದರೆ, ನಾವೆಲ್ಲಾ ಒಂದೇ ಕೊಡೆಯ ಅಡಿ ಬರಬೇಕು. ಇದು ಸಾಧ್ಯವಾದರೆ ಮಾತ್ರ ಸಮಾಜ ಒಂದಾಗುತ್ತದೆ. ಇದಕ್ಕೆ ಎಲ್ಲ ಶ್ರೀಗಳು ಸ್ಪಂದಿಸ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಲಿಂಗಾಯತರು ಒಗ್ಗಟ್ಟಾಗುವಂತೆ ಕರೆ ನೀಡಿದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ರಾಣಿ ಚೆನ್ನಮ ಹೆಸರಿಡಿ: ಈಗಾಗಲೇ ಶಿವಮೊಗ್ಗ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಬಿಎಸ್ವೈ ಅವರ ಹೆಸರಿಡ್ಬೇಕೆಂದು ರಾಜ್ಯ ಸರ್ಕಾರ ಸಂಪುಟದಲ್ಲಿ ನಿರ್ಧಾರ ಮಾಡಿದೆ. ಅದು ನಮಗೆ ಸ್ವಾಗತರ್ಹ. ಆದರೆ ಇದೀಗ ಬಿ.ಎಸ್.ಯಡಿಯೂರಪ್ಪ ವಿಮಾನ ನಿಲ್ದಾಣಕ್ಕೆ ನಮ್ಮ ಹೆಸರಿಡುವುದು ಬೇಡ ಎಂದು ಸಿಎಂಗೆ ಪತ್ರ ಬರೆದಿದ್ದಾರೆ. ಆದ್ದರಿಂದ ಸರ್ಕಾರ ಕೆಳದಿಯ ರಾಣಿ ಚೆನ್ನಮ್ಮಳ ಹೆಸರಿಡುವಂತೆ ಮನವಿ ಮಾಡಿದರು. ಈ ಹಿಂದೆ ಬೆಂಗಳೂರಿನಲ್ಲಿ ಸಿಎಂ ಭೇಟಿಯಾಗಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿಯ ರಾಣಿ ಚೆನ್ನಮ್ಮರ ಹೆಸರಿಡುವಂತೆ ಮನವಿ ಸಲ್ಲಿಸಲಾಗಿದೆ ಎಂದರು.
ಇದನ್ನೂ ಓದಿ: 'ಚಿನ್ನ ಆಮದಾಗುವುದು ಮುಸ್ಲಿಂ ರಾಷ್ಟ್ರಗಳಿಂದ, ಅಂಗಡಿಗಳಲ್ಲಿ ಖರೀದಿ ಏಕೆ ಬೇಡ?'
ಯಡಿಯೂರಪ್ಪನವರಲ್ಲಿ ರಾಜಾಹುಲಿಯ ಶಕ್ತಿ ಇದೆ: ಜನ ಅವರನ್ನು ವ್ಯಕ್ತಿಗತವಾಗಿ ರಾಜಾಹುಲಿ ಎಂದು ಹೇಳುವುದಿಲ್ಲ, ಅದೊಂದು ಶಕ್ತಿ ಅವರಲ್ಲಿ ಇದೆ. ಅವರು ಕೇವಲ ಒಂದು ಜನಾಂಗದ ರಾಜಕಾರಣಿಯಲ್ಲ, ಅವರು ಸರ್ವಜನಾಂಗವನ್ನು ತೆಗೆದುಕೊಂಡು ಹೋಗುವ ಬಲಾಢ್ಯ ಶಕ್ತಿ. ರಾಜ್ಯದಲ್ಲಿ ಪಾಪ್ಯೂಲರ್ ರಾಜಕಾರಣಿಗಳು ಎಂದರೆ ಮೊದಲು ಯಡಿಯೂರಪ್ಪ ನಂತರ ಸಿದ್ದರಾಮಯ್ಯನವರು. ಇನ್ನು ಯಡಿಯೂರಪ್ಪ ಸಿಎಂ ಆಗಿ ರಾಜ್ಯದಲ್ಲಿ ಮಾಡಿದ ಕೆಲಸ ಜನ ಮರೆಯುವಂತಿಲ್ಲ. ಮಠಕ್ಕೆ ಅನುದಾನ ಕೊಟ್ಟಿದ್ದಾರೆ. ಇದಷ್ಟೇ ಅಲ್ಲ ಇಂತಹ ಹಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅಂತಹ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದ್ರೆ ಎಂಟು ಎದೆ ಇರಬೇಕು. ಅದು ಯಡಿಯೂರಪ್ಪನವರಿಗೆ ಇದೆ ಎಂದು ಗುಣಗಾನ ಮಾಡಿದರು.