ದಾವಣಗೆರೆ: ಪವಿತ್ರ ಆರ್ಥಿಕತೆಗೆ ಒತ್ತಾಯಿಸಿ ರಂಗಕರ್ಮಿ ಪ್ರಸನ್ನ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ದಾವಣಗೆರೆಯಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಹಾಗೂ ಕಮ್ಯೂನಿಸ್ಟ್ ಮುಖಂಡ ಹೆಚ್ ಕೆ ರಾಮಚಂದ್ರಪ್ಪ ನೇತೃತ್ವದಲ್ಲಿ ಧರಣಿ ನಡೆಯಿತು. ರಂಗಕರ್ಮಿ ಪ್ರಸನ್ನರವರು ಆರಂಭಿಸಿರುವ ಉಪವಾಸ ಸತ್ಯಾಗ್ರಹಕ್ಕೆ ನಮ್ಮ ಬೆಂಬಲವಿದೆಯೆಂದ ಕಾರ್ಯಕರ್ತರು, ರೈತರ ಆರ್ಥಿಕ ಶಕ್ತಿಗಳನ್ನು ಸೋಲಿಸಬೇಕಾದರೆ ಮೊದಲು ನಿರ್ಮಲ ಆರ್ಥಿಕತೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಯುವ ಸಮುದಾಯಕ್ಕೆ ಉದ್ಯೋಗ ಹಾಗೂ ದೇಶದ ಪರಿಸರವನ್ನು ಉಳಿಸುವ ಶಕ್ತಿ ನಿರ್ಮಲ ಆರ್ಥಿಕತೆಗೆ ಇದೆ, ಪ್ರಸನ್ನರವರ ಹೋರಾಟದ ಭಾಗವಾಗಿ ಹಂತಹಂತವಾಗಿ ದಾವಣಗೆರೆಯಲ್ಲಿ ಹೋರಾಟ ನಡೆಸಲಾಗುವುದು ಎಂದು ಹೋರಾಟಗಾರರು ತಿಳಿಸಿದರು.