ದಾವಣಗೆರೆ: ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಒಂದೇ ದಿನದಲ್ಲಿ ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿವೆ. ಚನ್ನಗಿರಿ, ಹರಿಹರ ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು ತೋಟ, ಗದ್ದೆಗಳು ಹಳ್ಳದಂತಾಗಿವೆ. ಎರಡು ತಾಲೂಕಿನಲ್ಲಿ 500ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಸಾವಿರಾರು ಎಕರೆ ಜಮೀನು ಜಲಾವೃತವಾಗಿದೆ.
ಮಾವಿನಹೊಳೆ ಕೆರೆಗೆ ಕೋಡಿಬಿದ್ದಿದ್ದು, ಹರಿದ್ರಾವತಿಹಳ್ಳ, ಹಿರೇಹಳ್ಳ ಉಕ್ಕಿ ಹರಿಯುತ್ತಿವೆ. ಹಿರೇಹಳ್ಳ ತುಂಬಿ ಹರಿಯುತ್ತಿರುವುದರಿಂದ ಹಳ್ಳದ ತೀರದ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ, ರಾಗಿ ನೆಲಕಚ್ಚಿವೆ.
ಚನ್ನಗಿರಿ ತಾಲೂಕಿನಲ್ಲಿಯೇ 100ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಕೆರೆ ದಡದಲ್ಲಿ ನೀರು ಕುಡಿಯಲು ಹೋಗಿದ್ದ ಎರಡು ಎತ್ತುಗಳು ಮೃತಪಟ್ಟ ಘಟನೆ ದೋಣಿಹಳ್ಳಿ ಗ್ರಾಮದಲ್ಲಿ ನಡೆದಿದೆ.