ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೂನ್ 30 ರಂದು ವಿವಿಧ ಕಾರ್ಮಿಕ ಸಂಘಟನೆಗಳ ಸಹಯೋಗದೊಂದಿಗೆ ಪ್ರತಿಭಟನೆ ನಡೆಸಲು ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ಸ್ ಜಿಲ್ಲಾ ಘಟಕ ನಿರ್ಧರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಘಟಕದ ಜಿಲ್ಲಾ ಸಂಚಾಲಕ ಕೆ. ಹೆಚ್. ಆನಂದ್ ರಾಜ್ ಅವರು ನಾಳೆ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಘೋಷಿಸಿರುವ 5 ಸಾವಿರ ರೂಪಾಯಿ ಪರಿಹಾರವನ್ನು ಎಲ್ಲಾ ಅರ್ಜಿದಾರರಿಗೆ ನೀಡಬೇಕು. ಗ್ರಾಮ ಪಂಚಾಯಿತಿ ನೌಕರರಿಗೆ ಬಾಕಿ ಇರುವ ವೇತನವನ್ನು ಕೂಡಲೇ ಪಾವತಿಸಬೇಕು. ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ಹಾಗೂ ಹಮಾಲಿ ಕಾರ್ಮಿಕರಿಗೆ 10 ಸಾವಿರ ರೂಪಾಯಿ ನೀಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುವುದು.
ಕಾರ್ಮಿಕರ ಕಾನೂನುಗಳ ತಿದ್ದುಪಡಿ, ನೌಕರರ ವೇತನ ಕಡಿತ ಮತ್ತು ಕೆಲಸ ನಿರಾಕರಣೆ ಮಾಡುವುದನ್ನು ನಿಲ್ಲಿಸಬೇಕು. ಅಂಗನವಾಡಿ ನೌಕರರು ಸೇರಿ ಎಲ್ಲಾ ಫ್ರಂಟ್ ಲೈನ್ ವಾರಿಯರ್ಸ್ ಗಳನ್ನು ಖಾಯಂಗೊಳಿಸಬೇಕು. ಎಲ್ಲಾ ಬಡ ಕಾರ್ಮಿಕರಿಗೆ ರೇಷನ್ ಕಿಟ್ ವಿತರಿಸಬೇಕು ಎಂದು ಆಗ್ರಹಿಸಿದರು.