ದಾವಣಗೆರೆ: ತಾಲೂಕಿನ ಬಾತಿ ಕೆರೆ ಉಳಿವಿಗೆ ಕ್ರಮ ಕೈಗೊಳ್ಳಬೇಕು ಹಾಗೂ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು.
ಬಾತಿ ಗ್ರಾಮದಲ್ಲಿ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಮುಖಂಡ ರಾಮಚಂದ್ರಪ್ಪರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬಾತಿ ಕೆರೆಯ ಸುತ್ತಮುತ್ತ ಅಕ್ರಮವಾಗಿ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ತೆರವುಗೊಳಿಸುವ ಕೆಲಸ ಆಗಬೇಕಿದೆ. ಕೆರೆಯಲ್ಲಿ ತುಂಬಿರುವ ಹುಳುಗಳನ್ನು ತೆಗೆಯಬೇಕು. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಕೆರೆ ವಿಶಾಲವಾಗಿದ್ದು ಹಲವು ಗ್ರಾಮಗಳ ರೈತರ ಜೀವನಾಡಿ ಆಗಿದೆ. ಕೃಷಿ ಹಾಗೂ ಕುಡಿಯುವ ನೀರಿನ ಸೆಲೆಯಾಗಿದೆ. ಆದ್ರೆ 10 ವರ್ಷಗಳ ಹಿಂದೆ ಇದ್ದ ಕೆರೆಯ ಜಾಗ ದಿನೇ ದಿನೇ ಕಡಿಮೆ ಆಗುತ್ತಿದೆ. ಉಳ್ಳಂಥವರು ಯಾರ ಭಯವೂ ಇಲ್ಲದೆ ಕೆರೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳುತ್ತಿರುವುದೇ ಇದಕ್ಕೆ ಕಾರಣ. ಆದಷ್ಟು ಬೇಗ ಸರ್ಕಾರ ಇತ್ತ ಗಮನ ಹರಿಸಿ ಸರ್ವೇ ನಡೆಸಿ ಒತ್ತುವರಿ ಜಾಗ ಮರಳಿ ಪಡೆಯಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.