ದಾವಣಗೆರೆ: ಚಿತ್ರದುರ್ಗದ ಪಾಳೇಗಾರ 5ನೇ ಮದಕರಿನಾಯಕನ ಕಾಲದಲ್ಲಿ ಗುಪ್ತಚರ ಮಾಹಿತಿ ನೀಡುತ್ತಿದ್ದವರ ರಕ್ತ ಸಂಬಂಧಿಕರ ಬದುಕು ಬೀದಿಪಾಲಾಗಿದೆ.
ಪಾಳೇಗಾರರ ಆಡಳಿತದ ಕೇಂದ್ರಬಿಂದುವಾಗಿದ್ದ ತಾಲೂಕಿನ ಮಾಯಕೊಂಡ ಹೋಬಳಿಯ ಕಲ್ಕೇರೆ ಕ್ಯಾಂಪ್ನಲ್ಲಿ ಜನಸಾಮಾನ್ಯರು ವಾಸಿಸಲೂ ಯೋಗ್ಯವಲ್ಲದ ಸ್ಥಳದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ಜೀವನ ಸಾಗಿಸುತ್ತಿವೆ. ನೆಮ್ಮದಿಯ ಜೀವನ ಸಾಗಿಸಲು ಸರಿಯಾದ ಸೂರಿಲ್ಲದೆ ಚಿಕ್ಕ ಮಕ್ಕಳೊಂದಿಗೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ಪರದಾಡುತ್ತಿದ್ದಾರೆ.
ಈ ನಿರಾಶ್ರಿತರು ನಾಯಕ ಸಮುದಾಯಕ್ಕೆ ಸೇರಿದ್ದು, ಮನೆಗಳನ್ನು ನಿರ್ಮಾಣ ಮಾಡಿಕೊಡಲು ಜನಪ್ರತಿನಿಧಿಗಳಿಗೆ ಸಾಕಷ್ಟು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಚುನಾವಣೆ ಬಂದರೆ ಸಾಕು ಮತ ಕೇಳಲು ಬರುವ ಜನಪ್ರತಿನಿಧಿಗಳು, ಸೂರು ನೀಡುವ ಆಶ್ವಾಸನೆ ನೀಡಿ ಚುನಾವಣೆಯಲ್ಲಿ ಗೆದ್ದ ನಂತರ ಇತ್ತ ಮುಖ ಮಾಡಲ್ಲ ಎಂಬುದು ಇವರ ಅಳಲಾಗಿದೆ.