ದಾವಣಗೆರೆ : ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿಗೆ ಬರುವ ಶೀತ, ಕೆಮ್ಮು, ಜ್ವರದಂತಹ ಪ್ರಕರಣಗಳನ್ನು ಜಿಲ್ಲಾಸ್ಪತ್ರೆಗೆ ಉಲ್ಲೇಖಿಸುವ ಮೂಲಕ ಕೊರೊನಾ ಪರೀಕ್ಷೆ ಹೆಚ್ಚಿಸುವಲ್ಲಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್ ಬೀಳಗಿ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತ ಕಚೇರಿಯ ತುಂಗಾಭದ್ರ ಸಭಾಂಗಣದಲ್ಲಿ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಮತ್ತು ಐಎಂಎ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್-19 ಪರೀಕ್ಷೆಗಳು ಕಡಿಮೆ ವರದಿಯಾಗುತ್ತಿವೆ. ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ಕೋವಿಡ್-19 ಪರೀಕ್ಷೆ ಸಂಖ್ಯೆ ಹೆಚ್ಚಬೇಕು. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳು ತೆರೆದು ಸಕ್ರಿಯರಾಗಿ ಕೆಲಸ ಮಾಡಿದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿ ಕೋವಿಡ್-19 ಪರೀಕ್ಷೆ ನಡೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಹೊರರೋಗಿಗಳ ಸಂಖ್ಯೆ, ಇನ್‍ಫ್ಲುಯೆಂಜಾ ಮತ್ತು ಗಂಭೀರ ಉಸಿರಾಟದ ಸಮಸ್ಯೆಗಳ ಪ್ರಕರಣಗಳು ಕಡಿಮೆ ಆಗಿವೆ. ಇದಕ್ಕೆ ಕಾರಣ ಖಾಸಗಿ ಆಸ್ಪತ್ರೆಗಳು ಬಂದ್ ಆಗಿರುವುದಾಗಿದೆ. ಆದ್ದರಿಂದ ಆಸ್ಪತ್ರೆಗಳನ್ನು ತೆರೆದು ಸಕ್ರಿಯವಾಗಿ ಕೆಲಸ ಮಾಡಲು ವೈದ್ಯರು ತೊಂದರೆಗಳೇನಾದರೂ ಇದ್ದರೆ ಚರ್ಚಿಸುವಂತೆ ಮನವಿ ಮಾಡಿದರು.
ಎಸ್ಪಿ ಹನುಮಂತರಾಯ ಮಾತನಾಡಿ, ಕಲಬುರ್ಗಿಯಲ್ಲಿ ನಿನ್ನೆ ಗಂಭೀರ ಉಸಿರಾಟದ ಪ್ರಕರಣವೊಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಆ ವ್ಯಕ್ತಿ ಮರಣ ಹೊಂದಿದ್ದಾರೆ. ಅವರಿಗೆ ಕೋವಿಡ್-19 ಇರುವುದು ದೃಢಪಟ್ಟಿದೆ. ಖಾಸಗಿ ನರ್ಸಿಂಗ್ ಹೋಂನವರ ನಿರ್ಲಕ್ಷ್ಯ ಅಥವಾ ಸತ್ಯ ಮುಚ್ಚಿಟ್ಟ ಕಾರಣದಿಂದ ಈ ಸಾವು ಸಂಭವಿಸಿದೆ. ಆದ್ದರಿಂದ ಖಾಸಗಿ ಆಸ್ಪತ್ರೆಗಳು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಯಾವುದೇ ಜ್ವರ, ಕೆಮ್ಮು, ಶೀತ ಪ್ರಕರಣಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಬೇಕೆಂದರು.