ದಾವಣಗೆರೆ: ಕೋವಿಡ್ -19 ಲಸಿಕೆ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಆರ್.ಸಿ.ಹೆಚ್ ಅಧಿಕಾರಿ ಡಾ. ಮೀನಾಕ್ಷಿ, ಕೋವಿಡ್-19 ಲಸಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದ 5ನೇ ಟಾಸ್ಕ್ ಫೋರ್ಸ್ ಸಭೆ ಇದಾಗಿದ್ದು, ಮೂರು ಹಂತಗಳಲ್ಲಿ ಕೋವಿಡ್ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೊದಲನೇ ಹಂತದಲ್ಲಿ ಹೆಲ್ತ್ ಕೇರ್ ವರ್ಕರ್ಸ್ಗೆ ಲಸಿಕೆ ನೀಡಲಾಗುವುದು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಫಲಾನುಭವಿಗಳ ಪಟ್ಟಿಯನ್ನು ಈಗಾಗಲೇ ತಯಾರಿಸಿ ಟೆಂಪ್ಲೇಟ್‍ನಲ್ಲಿ ಪೋರ್ಟಲ್‍ಗೆ ಅಪ್‍ಲೋಡ್ ಮಾಡಲಾಗಿದೆ ಎಂದು ತಿಳಿಸಿದರು.
5,771 ಸರ್ಕಾರಿ ಮತ್ತು 4,921 ಖಾಸಗಿ ಸೇರಿದಂತೆ ಒಟ್ಟು 10,692 ಹೆಲ್ತ್ ಕೇರ್ ಸಿಬ್ಬಂದಿ ಮಾಹಿತಿಯನ್ನು ಅಪ್‍ಲೋಡ್ ಮಾಡಲಾಗಿದ್ದು, ಮೊದಲನೇ ಹಂತಕ್ಕೆ ಲಸಿಕೆ ನೀಡಲು ಅಗತ್ಯವಾದ ಎಲ್ಲಾ ಸಿದ್ಧತೆಗಳು ನಡೆದಿವೆ. 2ನೇ ಹಂತದಲ್ಲಿ ಫ್ರಂಟ್‍ಲೈನ್ ವರ್ಕರ್ಗಳಾದ ನಗರ ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಹೋಂ ಗಾರ್ಡ್ಸ್, ಎನ್‍ಸಿಸಿ, ಎನ್‍ಎಸ್‍ಎಸ್, ವಿಪತ್ತು ನಿರ್ವಹಣೆ ಸ್ವಯಂ ಸೇವಕರುಗಳ ಪಟ್ಟಿ ತಯಾರಿಸಲಾಗುತ್ತಿದೆ. 3ನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ದುರ್ಬಲ ವರ್ಗದ ಮತ್ತು 50 ವರ್ಷದೊಳಗಿನ ಇತರೆ ಆರೋಗ್ಯ ಸಮಸ್ಯೆ ಇರುವ ಜನರನ್ನು ಗುರುತಿಸಿ ಪಟ್ಟಿ ತಯಾರಿಸಲಾಗುವುದು ಎಂದರು.
ಲಸಿಕೆ ನೀಡುವ ಬಗ್ಗೆ ಮೈಕ್ರೊ ಪ್ಲಾನ್ ಸಿದ್ಧವಾಗಿದೆ. ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ತಾಲೂಕು ಮಟ್ಟದಲ್ಲಿ ಒಂದು ಸುತ್ತಿನ ಟಾಸ್ಕ್ ಫೋರ್ಸ್ ಸಭೆ ಆಗಿದೆ. ತಾಲೂಕು ವೈದ್ಯಾಧಿಕಾರಿ ಮತ್ತು ಬಿಹೆಚ್‍ಇಒಗಳಿಗೆ ತರಬೇತಿ ಆಗಿದೆ. ಲಸಿಕಾ ಕಾರ್ಯಕ್ರಮಕ್ಕೆ ಅಧಿಕಾರಿಗಳು, ಸೆಕ್ಟರ್ ಅಧಿಕಾರಿ, ಮೇಲ್ವಿಚಾರಣೆ ಸೇರಿದಂತೆ ಇತರೆ ಅಧಿಕಾರಿಗಳ ನಿಯೋಜನೆ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಮೂರು ಕೊಠಡಿ ವ್ಯವಸ್ಥೆ: ಲಸಿಕಾ ಕಾರ್ಯಕ್ರಮದಲ್ಲಿ ಮೂರು ಕೊಠಡಿಗಳ ವ್ಯವಸ್ಥೆ ಮಾಡಬೇಕಿದೆ. ಲಸಿಕಾ ಕೊಠಡಿ, ಲಸಿಕೆ ನೀಡಿದ ನಂತರ ನಿಗಾ ವಹಿಸಲು ನಿಗಾವಣೆ ಕೊಠಡಿ ಮತ್ತು ಸ್ವಲ್ಪ ಕಾಲ ವಿಶ್ರಾಂತಿ ನೀಡಲು ನಿರೀಕ್ಷಣಾ ಕೊಠಡಿ ಸೇರಿ ಒಟ್ಟು ಮೂರು ಕೊಠಡಿಗಳ ವ್ಯವಸ್ಥೆ ಮಾಡಬೇಕಿದೆ. ಆದ ಕಾರಣ ಶಾಲೆಗಳು ಅಥವಾ ಸಮುದಾಯ ಭವನಗಳಲ್ಲಿ ಲಸಿಕೆ ಕಾರ್ಯಕ್ರಮ ಮಾಡಲು ಯೋಜಿಸಲಾಗುತ್ತಿದೆ.
ಲಸಿಕೆಯನ್ನು 2 ಡೋಸ್‍ಗಳಲ್ಲಿ ನೀಡಬೇಕಾಗಿದ್ದು, ಮೊದಲ ಡೋಸ್ ಆದ 3 ವಾರಗಳ ನಂತರ ಎರಡನೇ ಡೋಸ್ ನೀಡಲಾಗುವುದು. ಮೊದಲ ಹಂತ ಮತ್ತು ಎರಡನೇ ಹಂತಗಳಿಗೆ ಲಸಿಕಾಕಾರರು ಮತ್ತು ಸಿಬ್ಬಂದಿ ಕೊರತೆ ಆಗುವುದಿಲ್ಲ. ಆದರೆ ಮೂರನೇ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಬಹುದಾಗಿದ್ದು, ಸಿಬ್ಬಂದಿ ಕೊರತೆಯಾಗುವುದರಿಂದ ಇತರೆ ಇಲಾಖೆಗಳ ಸಿಬ್ಬಂದಿಗೆ ತರಬೇತಿ ನೀಡಿ, ಅವರನ್ನು ನಿಗಾವಣೆ ಮತ್ತು ನಿರೀಕ್ಷಣಾ ಕೊಠಡಿಗಳಿಗೆ ನಿಯೋಜಿಸಬಹುದು.
ಈ ಲಸಿಕಾ ಕಾರ್ಯಕ್ರಮಕ್ಕೆ ನಗರದ ಮೆಡಿಕಲ್ ಕಾಲೇಜುಗಳ ಸಹಕಾರ ಅಗತ್ಯವಿದ್ದು, ಈಗಾಗಲೇ ಬಾಪೂಜಿ ಮೆಡಿಕಲ್ ಕಾಲೇಜಿನ ವೈದ್ಯರು, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಎಸ್‍ಎಸ್‍ಐಎಂಎಸ್ ಕಾಲೇಜಿಗೆ ಶೀಘ್ರದಲ್ಲೇ ತರಬೇತಿ ನೀಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಮುಖ್ಯವಾಗಿ ಜನರಲ್ಲಿ ಈ ಲಸಿಕೆ ಬಗ್ಗೆ ಅಂಜಿಕೆ ಮತ್ತು ತಪ್ಪು ಕಲ್ಪನೆಗಳು ದೂರವಾಗುವಂತೆ ವಿವಿಧ ಸಂಘ ಸಂಸ್ಥೆಗಳು ಸಮುದಾಯದಲ್ಲಿ ಅರಿವು ಮೂಡಿಸುವ ಮೂಲಕ ಸಹಕರಿಸಬೇಕು. ಇನ್ನು ಪೊಲೀಸ್ ಇಲಾಖೆ ಮತ್ತು ಹೋಂ ಗಾರ್ಡ್ಸ್ ಸೇರಿದಂತೆ ಸುಮಾರು 2,220 ಸಿಬ್ಬಂದಿಯನ್ನು ಮೊದಲನೇ ಹಂತದಲ್ಲಿ ಲಸಿಕೆ ನೀಡಲು ಪೋರ್ಟಲ್‍ನಲ್ಲಿ ಮಾಹಿತಿ ಅಪ್‍ಲೋಡ್ ಮಾಡಲಾಗುತ್ತಿದೆ. ಎನ್‍ಸಿಸಿ ಮತ್ತು ಎನ್‍ಎಸ್‍ಎಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಅವರ ಮಾಹಿತಿಯನ್ನು ಅಪ್‍ಲೋಡ್ ಮಾಡಲಾಗುವುದು ಎಂದು ತಿಳಿಸಿದರು.