ದಾವಣಗೆರೆ: ಆಸ್ಪತ್ರೆಗಳಲ್ಲಿ ಚಿಕಿತ್ಸೆ ಜೊತೆಗೆ ರಕ್ಷಣೆಯೂ ಅಷ್ಟೇ ಮುಖ್ಯ. ಸ್ವಲ್ಪ ಯಡವಟ್ಟಾದ್ರೂ ಭಾರೀ ಪರಿಣಾಮಣದ ನಷ್ಟ ತೆರಬೇಕಾಗುತ್ತದೆ. ಆಸ್ಪತ್ರೆಗಳಲ್ಲಿ ಕೊರೊನಾ ಬರುವುದಕ್ಕಿಂತ ಮುಂಚೆ ಮತ್ತು ಈಗ ಸಾಕಷ್ಟು ಸುರಕ್ಷತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅದರಲ್ಲಿ ಬಹುಮುಖ್ಯವಾದದ್ದು ಅಗ್ನಿ ಅವಘಡ ತಪ್ಪಿಸಲು ತೆಗೆದುಕೊಳ್ಳಬೇಕಾದ ಕ್ರಮಗಳು. ಒಂದು ವೇಳೆ ಅಗ್ನಿ ಅನಾಹುತ ಸಂಭವಿಸಿದರೆ ಅಗ್ನಿಶಾಮಕ ದಳ ಸಿಬ್ಬಂದಿ ಬರುವ ಮುನ್ನ ಹೇಗೆ ಪ್ರಾಥಮಿಕವಾಗಿ ನಿಯಂತ್ರಿಸಬೇಕು ಎಂಬುದಾಗಿದೆ.
ಜಿಲ್ಲೆಯ ಆಸ್ಪತ್ರೆಗಳಲ್ಲಿ ಮೊದಲಿಗಿಂತ ಈಗ ಹೆಚ್ವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ದೊಡ್ಡ ಆಸ್ಪತ್ರೆಗಳಲ್ಲಿ ಈ ಸಮಸ್ಯೆ ಇಲ್ಲ. ಈಗಾಗಲೇ 15 ಆಸ್ಪತ್ರೆಗಳು ಅಗ್ನಿಶಾಮಕ ದಳ ಇಲಾಖೆಯಿಂದ ಎನ್ಒಸಿ ಅಂದರೆ, ನಿರಪೇಕ್ಷಣಾ ಪತ್ರ ಪಡೆದಿವೆ. ಕೆಲ ಆಸ್ಪತ್ರೆಗಳಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಈಗಾಗಲೇ ಅಗ್ನಿ ಶಾಮಕ ದಳದ ಅಧಿಕಾರಿಗಳ ಜೊತೆ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಕೆಲ ಆಸ್ಪತ್ರೆಗಳು ನಿರ್ಲಕ್ಷ್ಯ ವಹಿಸಿವೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.
ಎನ್ಒಸಿ ಪಡೆಯುವುದು ಹೇಗೆ: ಅಗ್ನಿಶಾಮಕ ದಳ ನೇರವಾಗಿ ಸಲಹಾ ಪತ್ರ ಅಥವಾ ಎನ್ಒಸಿ ನೀಡುವುದಿಲ್ಲ. ಖಾಸಗಿ ಆಸ್ಪತ್ರೆಗಳ ಮಾಲೀಕರು ಸರ್ಕಾರಕ್ಕೆ ಶುಲ್ಕ ಪಾವತಿಸಿ, ಬಳಿಕ ಮನವಿ ಸಲ್ಲಿಸಿದರೆ ನೀಡಲಾಗುತ್ತದೆ. ಮಾತ್ರವಲ್ಲ, ಅಗ್ನಿ ಅವಘಡ ಸಂಭವಿಸಿದರೆ ತಕ್ಷಣ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕೆಂಬ ಬಗ್ಗೆಯೂ ತರಬೇತಿ ನೀಡಲಾಗುತ್ತದೆ.
ಬೆಂಕಿ ಕಾಣಿಸಿಕೊಂಡಾಗ ಸ್ಥಳಕ್ಕೆ ವಾಹನ ಸಮೇತ ಬರಲು ಅಗ್ನಿಶಾಮಕ ದಳ ಸಿಬ್ಬಂದಿಗೆ ಕನಿಷ್ಠ ಹತ್ತು ನಿಮಿಷವಾದರೂ ಬೇಕು. ಈ ಹಿನ್ನೆಲೆಯಲ್ಲಿ ಕೂಡಲೇ ಬೆಂಕಿ ನಿಯಂತ್ರಣಕ್ಕೆ ಆಸ್ಪತ್ರೆ ಸಿಬ್ಬಂದಿ ಏನು ಮಾಡಬೇಕೆಂಬ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಜಿಲ್ಲಾಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇಕಡಾ 70 ರಿಂದ 80 ರಷ್ಟು ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ಜಯರಾಮಯ್ಯ ಹೇಳಿದರು.
ಕೆಲ ಖಾಸಗಿ ಆಸ್ಪತ್ರೆಗಳು ಮಾತ್ರ ಇತ್ತ ಗಮನ ಹರಿಸಿಲ್ಲ. ನಾವು ಯಾರಿಗೂ ಉಚಿತವಾಗಿ ತರಬೇತಿ, ಸಲಹಾ ಪತ್ರ, ಎನ್ಒಸಿ ನೀಡಲು ಬರುವುದಿಲ್ಲ. ಜಿಲ್ಲೆಯಲ್ಲಿ ಇದುವರೆಗೆ ಆಸ್ಪತ್ರೆಗಳಲ್ಲಿ ದೊಡ್ಡ ಅಗ್ನಿ ಅನಾಹುತ ಸಂಭವಿಸಿಲ್ಲ. ಯಾವುದೇ ಪ್ರಾಣ, ವಸ್ತು ಹಾನಿ ಆಗಿಲ್ಲ ಎಂದು ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿ ಜಯರಾಮಯ್ಯ ಪಿ.ಎಸ್ ಅವರು "ಈಟಿವಿ ಭಾರತ'ಕ್ಕೆ ತಿಳಿಸಿದರು.
ಡಿಹೆಚ್ಒ ರಾಘವೇಂದ್ರ ಸ್ವಾಮಿ ಹೇಳೋದೇನು: ಖಾಸಗಿ ಆಸ್ಪತ್ರೆಗಳು ನಿಯಮಾನುಸಾರ ಬಾಡಿಗೆ ಕರಾರು ಪತ್ರ, ಮಾಲಿನ್ಯ ಹೊರಗಡೆ ಹೋಗಲು, ರೋಗಿಗಳ ರಕ್ಷಣೆ, ಸುರಕ್ಷತಾ ಕ್ರಮಗಳೂ ಸೇರಿದಂತೆ ಎಲ್ಲಾ ರೀತಿಯ ಅನುಮತಿ ಪಡೆದ ಬಳಿಕ ಸ್ಥಳ ಪರಿಶೀಲನೆ ಮಾಡಿ ನಾವು ಆರಂಭಿಸಲು ಅನುಮತಿ ನೀಡುತ್ತೇವೆ. ಕೆಲವೊಮ್ಮೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಾಗ ಸರ್ಕಾರದ ನಿಯಮಾನುಸಾರ ಪಡೆದ ಮಾನ್ಯತೆ ಪತ್ರ ಒದಗಿಸದಿದ್ದರೆ ಅನುಮತಿ ನೀಡಲಾಗದು. ಇದರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮತಿ ನೀಡುವುದಿಲ್ಲ ಎಂಬ ಆಪಾದನೆ ಕೇಳಿ ಬರುತ್ತದೆ. ಜಿಲ್ಲೆಯಲ್ಲಿ 440 ಆಸ್ಪತ್ರೆ, ಕ್ಲಿನಿಕ್ಗಳು ಪರವಾನಿಗೆ ಪಡೆದಿವೆ. ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸಿದ ಬಳಿಕವೇ ಅನುಮತಿ ನೀಡುತ್ತೇವೆ. ಕೊರೊನಾ ಹೆಚ್ಚಾದ ನಂತರ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚನೆ ನೀಡಲಾಗಿದೆ. ಇದನ್ನು ಪಾಲಿಸಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಎಸ್.ರಾಘವೇಂದ್ರ ಸ್ವಾಮಿ.