ದಾವಣಗೆರೆ: ಸಿದ್ದರಾಮಯ್ಯ ಚುನಾವಣೆ ಸ್ಪರ್ಧೆಗೆ ಕ್ಷೇತ್ರ ಆಯ್ಕೆ ಗೊಂದಲವಾಗಿದೆ. ಅವರಿಗೆ ಎಲ್ಲಿ ನಿಲ್ಲಬೇಕು ಅಂತ ಗೊತ್ತಾಗ್ತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು ಬಂದಿದ್ದರು, ಅವರಿಗೆ ಕೈಕೊಟ್ಟ ಬಾದಾಮಿಗೆ ಬಂದರು, ಬಾದಾಮಿಯಿಂದ ಗೆದ್ದು ಕೊನೆಗೆ ಅವರಿಗೂ ಕೈಕೊಟ್ಟು ಬಂದರು, ಒಟ್ಟಾರೆ ಕಾಂಗ್ರೆಸ್ ಕೈಕೊಡುವ ಪಕ್ಷ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಿದ್ದರಾಮಯ್ಯ ಕುರಿತು ವ್ಯಂಗ್ಯವಾಡಿದರು. ದಾವಣಗೆರೆಯಲ್ಲಿ ನಡೆದ ಬೂತ್ ವಿಜಯ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ನವರು ಮಾಡುತ್ತಿರುವ ಪ್ರಜಾಧ್ವನಿ ಯಾತ್ರೆ ಇವರ ಪಾಲಿನ ಅಂತಿಮ ಯಾತ್ರೆ, ಇವರಿಗೆ ಧ್ವನಿನೇ ಇಲ್ಲ. ಇಡೀ ಭಾರತದಲ್ಲಿ ಕಾಂಗ್ರೆಸ್ ನಾಲ್ಕನೇ ಸ್ಥಾನದಲ್ಲಿದೆ ಎಂದು ವಾಗ್ದಾಳಿ ನಡೆಸಿದರು.
ದಾವಣಗೆರೆ ರಾಜ್ಯದ ಸೆಂಟರ್, ಬಿಜೆಪಿ ಗೆಲುವಿಗೆ ಸೆಂಟರ್ ಆಗಬೇಕು: ದಾವಣಗೆರೆ ರಾಜ್ಯದ ಸೆಂಟರ್, ಇಲ್ಲಿಂದನೇ ಬಿಜೆಪಿ ಗೆಲುವಿಗೆ ಸೆಂಟರ್ ಆಗಬೇಕಾಗಿದೆ ಎಂದು ಕಾರ್ಯಕರ್ತರಿಗೆ ಸಂದೇಶ ರವಾನಿಸಿದರು. ಇನ್ನು, ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಗುಜರಾತ್, ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನಾಲ್ಕನೇ ನಂಬರ್ ಪಾರ್ಟಿಯಾಗಿದೆ. ಹಿಮಾಚಲ ಪ್ರದೇಶ ಒಂದು ಬಿಟ್ಟು ಉಳಿದ ಕಡೆ ನಾಲ್ಕನೇ ಪಕ್ಷವಾಗಿ ಎಂದರು.
200 ಯುನಿಟ್ ಉಚಿತ ವಿದ್ಯುತ್ ನೀಡುವ ಕಾಂಗ್ರೆಸ್ ಘೋಷಣೆ ವ್ಯಂಗ್ಯ: 200 ಯುನಿಟ್ ಉಚಿತ ವಿದ್ಯುತ್ ನೀಡುವ ಕಾಂಗ್ರೆಸ್ ಘೋಷಣೆ ಮಾಡುವ ಮೂಲಕ ಜನರಿಗೆ ಟೋಪಿ ಹಾಕುವ ಕೆಲಸವನ್ನು ವ್ಯವಸ್ಥಿತವಾಗಿ ಕೈನಾಯಕರು ಮಾಡುತ್ತಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷ 60 ವರ್ಷ ಆಡಳಿತವಿದ್ದಾಗ ಏನು ಮಾಡಿದೆ, ದುಡ್ಡು ಕೊಡುತ್ತೇವೆ ಅಂದಾಗ ಅಂದು ಕರೆಂಟ್ ಕೊಟ್ಟಿಲ್ಲ, ಇವಾಗ ಉಚಿತ ಕರೆಂಟ್ ಕೊಡೋಕೆ ಹೋಗ್ತಾ ಇದಾರೆ, ಇದರ ದುಷ್ಪರಿಣಾಮ ಏನು ಆಗುತ್ತೆ ಅನ್ನೋದು ಅವರಿಗೆ ಗೊತ್ತಿಲ್ಲ ಎಂದು ಹೇಳಿದರು.
ಚೀನಾದಿಂದ ಲಂಚ ಪಡೆದ ಪಾರ್ಟಿ ಕಾಂಗ್ರೆಸ್ : ಚೀನಾದಿಂದ ಲಂಚ ಪಡೆದ ಏಕೈಕ ಪಾರ್ಟಿ ಅದು ಕಾಂಗ್ರೆಸ್. ಅವರ ಕಾಲದಲ್ಲಿ ನಮ್ಮ ದೇಶದ ಭೂಮಿಯನ್ನು ಚೀನಾ ದೇಶಕ್ಕೆ ಕೊಟ್ಟವರು ಇವರೇ. ಇವರ ಅಧಿಕಾರಾವಧಿಯಲ್ಲಿ ದೇಶಾದ್ಯಂತ ಬಾಂಬ್ ಸ್ಫೋಟ ಆಗಿವೆ. ನಮ್ಮ ದೇಶದಲ್ಲಿ ಬಾಂಬ್ ಹಾಕಿದ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವರನ್ನು ಪಾಕಿಸ್ತಾನಕ್ಕೆ ನುಗ್ಗಿ ನಮ್ಮ ಸೈನಿಕರು ಹೊಡೆದು ಬರುವ ಪರಿಸ್ಥಿತಿ ನಮ್ಮ ಸರ್ಕಾರದಲ್ಲಿದೆ. ಆದರೆ ಕಾಂಗ್ರೆಸ್ ಅವಧಿ ವೇಳೆ, ಉಗ್ರ ಚಟುವಟಿಕೆ ನಡೆದಾಗ ಇದನ್ನು ನಾವು ಖಂಡಿಸುತ್ತೆವೆ ಅಂತ ಹೇಳಿ ಸುಮ್ಮನೆ ಆಗುತ್ತಿದ್ದರು ಎಂದರು.
ಕಾಂಗ್ರೆಸ್ ಪಕ್ಷದ ಗಾಂಧಿ ಕುಟುಂಬದಲ್ಲಿ ನಾಯಕರು ಜನಿಸುತ್ತಾರೆ: ಕಾಂಗ್ರೆಸ್ ಪಕ್ಷದ ಗಾಂಧಿ ಕುಟುಂಬದಲ್ಲಿ ನಾಯಕರು ಜನಿಸುತ್ತಾರೆ, ಎಲ್ಲರೂ ಗಾಂಧಿ ಕುಟುಂಬದಲ್ಲೇ ನಾಯಕರು ಹುಟ್ಟಿದರೆ, ಬೇರೆ ಎಲ್ಲಿ ನಾಯಕರು ಹುಟ್ಟಬೇಕು..? ಅವರ ಮನೆಯಲ್ಲೇ ನಾಯಕರನ್ನು ಹುಟ್ಟಿಸಿಕೊಂಡು ಬರುತ್ತಾರೆ. ಈ ಮೊದಲು ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ್ ಗಾಂಧಿ ಈಗ ಪಪ್ಪು ಗಾಂಧಿ ಸರದಿ. ಬೇರೆ ಯಾರನ್ನೂ ನಾಯಕರನ್ನಾಗಿ ಬೆಳೆಯಲು ಗಾಂಧಿ ಕುಟುಂಬ ಬಿಡುವುದಿಲ್ಲ. ಆದರೆ ಬಿಜೆಪಿಯಲ್ಲಿ ಮಾತ್ರ ಕಾರ್ಯಕರ್ತರು ನಾಯಕರಾಗುತ್ತಾರೆ. ಅದಕ್ಕೆ ಉದಾಹರಣೆ ನಾನೆ ನಮ್ಮ ಮನೆಯಲ್ಲಿ ಯಾರೂ ರಾಜಕೀಯದಲ್ಲಿ ಇರಲಿಲ್ಲ, ಪಕ್ಷ ನನ್ನನ್ನು ಗುರುತಿಸಿ ಅಧಿಕಾರ ನೀಡಿದೆ ಎಂದು ಕೈ ನಾಯಕರಿಗೆ ಪ್ರಹ್ಲಾದ್ ಜೋಶಿ ಕುಟುಕಿದರು.
ಐದು ಜಿಲ್ಲೆ, ಕುಟುಂಬದ ಐದು ಜನ ಇದೇ ಪಂಚ ರತ್ನ ಯಾತ್ರೆ: ಐದು ಜಿಲ್ಲೆ, ದೇವೇಗೌಡ್ರು ಕುಟುಂಬದ ಐದು ಜನ ಇದೇ ಪಂಚ ರತ್ನ ಯಾತ್ರೆ ಎಂದು ಜೆಡಿಎಸ್ ನಾಯಕರ ಕಾಲು ಎಳೆದರು. ಜೆಡಿಎಸ್ ಪಕ್ಷದ ನಾಯಕರ ವಿರುದ್ಧ ಮಾತು ಆರಂಭಿಸಿದ ಜೋಶಿ ಅವರು ಹೆಚ್ ಡಿ ದೇವೇಗೌಡರು, ಹೆಚ್ ಡಿ ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಇವರೇ ಪಂಚರತ್ನರು. ಇದೇ ಜೆಡಿಎಸ್ನ ಪಂಚರತ್ನ ಯಾತ್ರೆ, ಇದಲ್ಲದೆ ಧರ್ಮಪತ್ನಿಯರನ್ನು ಸೇರಿಸಿದರೇ ನವರತ್ನ ಯಾತ್ರೆ ಮಾಡಬಹುದು ಎಂದು ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದರು.
ಇದನ್ನೂ ಓದಿ: 13 ಬಜೆಟ್ ಮಂಡಿಸಿದ, ಒಮ್ಮೆ ಸಿಎಂ ಆದವರಿಗೆ ಒಂದು ಕ್ಷೇತ್ರ ಹುಡುಕುವ ಯೋಗ್ಯತೆ ಇಲ್ಲ: ಪ್ರಹ್ಲಾದ್ ಜೋಶಿ