ದಾವಣಗೆರೆ: ಹಲವು ವರ್ಷಗಳಿಂದ ಕಂದಾಚಾರ ಪಾಲಿಸಿಕೊಂಡು ಬರುತ್ತಿದ್ದ ಮುಟ್ಟಾದ ಮಹಿಳೆಯರನ್ನು ಹೊರಗಿಡುವ ಪದ್ಧತಿಗೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಇತಿಶ್ರೀ ಹಾಡಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಬಳಿಯ ಹಿರೇಗಂಗೂರು ಗೊಲ್ಲರಹಟ್ಟಿಯಲ್ಲಿ ಹೆರಿಗೆಯಾದ ಹಾಗೂ ಮುಟ್ಟಾದ ಮಹಿಳೆಯರನ್ನು ಮನೆಯಿಂದ ಹೊರಗಿಡುವ ಪದ್ಧತಿಯನ್ನು ಪ್ರತ್ಯಕ್ಷವಾಗಿ ಕಂಡು ಗ್ರಾಮಸ್ಥರು ಹಾಗೂ ಮಹಿಳೆಯರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೊಲ್ಲರಹಟ್ಟಿಗೆ ಪೂರ್ಣಿಮಾ ಶ್ರೀನಿವಾಸ್ ಆಗಮಿಸಿದ ವೇಳೆ ಈ ವಿಷಯ ಗೊತ್ತಾಗಿದೆ. ಕೂಡಲೇ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿ ಮುಂದಿನ ದಿನಗಳಲ್ಲಿ ಇಂಥ ಮೌಢ್ಯಾಚರಣೆ ಮಾಡಬೇಡಿ. ಮಹಿಳೆಯರ ಕಷ್ಟ ಅರ್ಥ ಮಾಡಿಕೊಳ್ಳಿ. ಹಿಂದಿನ ಕಾಲದಲ್ಲಿ ಸರಿಯಾದ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಈ ಪದ್ಧತಿ ಅನುಸರಿಸಿರಬಹುದು. ಆದ್ರೆ, ಈಗ ಎಲ್ಲಾ ರೀತಿಯ ಸೌಲಭ್ಯಗಳು ಸಿಗುತ್ತವೆ. ಹಾಗಾಗಿ ಇಂಥ ಮೂಢ ಆಚರಣೆಗೆ ಕೊನೆ ಹಾಡಿ ಎಂದರು. ಇದಕ್ಕೆ ಗ್ರಾಮಸ್ಥರು ಸಮ್ಮತಿ ಸೂಚಿಸಿದರೆ, ಮಹಿಳೆಯರು ಸಂತಸ ವ್ಯಕ್ತಪಡಿಸಿದರು.
ದಾವಣಗೆರೆ, ತುಮಕೂರು, ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳಲ್ಲಿ ಅನಿಷ್ಠ ಪದ್ಧತಿ ಇನ್ನೂ ಜಾರಿಯಲ್ಲಿದೆ. ಹೆರಿಗೆಯಾದ, ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಗೆ ಇಡುವ ಪದ್ಧತಿ ಇದ್ದು, ಈಗಾಗಲೇ ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿ ಶೇ. 50ರಷ್ಟನ್ನು ನಿಲ್ಲಿಸಿದ್ದೇನೆ. ಮೂರು ಜಿಲ್ಲೆಗಳಲ್ಲಿನ ಹಟ್ಟಿಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ.
ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಹಾಗಾಗಿ, ಈ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇಂಥ ಆಚರಣೆ ಜಾರಿಯಲ್ಲಿರಲು ಅನಕ್ಷರತೆ, ಮೂಢನಂಬಿಕೆಗಳೇ ಕಾರಣ ಎಂದು ಪೂರ್ಣಿಮಾ ಶ್ರೀನಿವಾಸ್ ಹೇಳಿದರು.