ದಾವಣಗೆರೆ: ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಸರ್ಕಾರದ ವಿರುದ್ಧ ರಾಜ್ಯದ ಜನ ಛೀಮಾರಿ ಹಾಕ್ತಿದ್ದಾರೆ. ತಕ್ಷಣ ಐದು ಗ್ಯಾರಂಟಿಗಳನ್ನು ಜಾರಿ ಮಾಡದೆ ಇದ್ದರೆ ಹೋರಾಟ ಕಟ್ಟಿಟ್ಟಬುತ್ತಿ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ನಗರದಲ್ಲಿ ಇಂದು ಜರುಗಿದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಗೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅನ್ನಭಾಗ್ಯ ಅಕ್ಕಿ ವಿಚಾರವಾಗಿ ಉದ್ದೇಶಪೂರ್ವಕವಾಗಿ ಕೇಂದ್ರದತ್ತ ಕೈ ಮಾಡಿ ತೋರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡಬೇಕಾದರೆ ರಾಜ್ಯ ಸರ್ಕಾರ ಅಕ್ಕಿಯನ್ನು ಖರೀದಿ ಮಾಡುವ ಮುಖೇನ ರಾಜ್ಯದ ಜನರಿಗೆ ಉಚಿತವಾಗಿ ನೀಡಬೇಕು ಎಂದರು.
ಅದನ್ನು ಬಿಟ್ಟು ಸುಳ್ಳು ಭರವಸೆ ನೀಡುವ ಕೆಲಸವನ್ನು ಮಾಡ್ತಿದ್ದಾರೆ. ಕಾಂಗ್ರೆಸ್ನವರು ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ. ಅದರಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯಿಂದ ಸಾಕಷ್ಟು ಆತಂಕಗಳಾಗಿವೆ. ಉಳಿದ ನಾಲ್ಕು ಗ್ಯಾರಂಟಿಗಳನ್ನು ವಿಧಾನಸಭೆ ಅಧಿವೇಶನ ಆರಂಭ ಆಗುವ ಮುನ್ನ ಜಾರಿ ಮಾಡಲಿಲ್ಲ ಅಂದರೆ ಬಿಜೆಪಿಯವರು ವಿಧಾನಸಭೆಯ ಒಳಗೆ ಹಾಗೂ ಹೊರಗೆ ಎರಡೂ ಕಡೆಯಲ್ಲೂ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾನು ಕೂಡ ವಿಧಾನಸಭೆಯ ಮುಂದೆ ಧರಣಿ ಕೂರಲು ಸಿದ್ಧನಿದ್ದೇನೆ. ಕಾಂಗ್ರೆಸ್ನವರು ನೀಡಿದ ಐದು ಗ್ಯಾರಂಟಿಗಳನ್ನು ತಕ್ಷಣ ಪೂರ್ಣ ಮಾಡ್ಬೇಕು. ವಿನಾಕಾರಣ ಕೇಂದ್ರ ಸರ್ಕಾರದ ಕಡೆ ಕೈ ಮಾಡಿ ತೋರಿಸುವುದು ಅಕ್ಷಮ್ಯ ಅಪರಾಧ. ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚುವರಿ ಅಕ್ಕಿಯನ್ನು ಕೊಡುತ್ತೆ ಎಂದು ಹೇಳಿರಲಿಲ್ಲ. ಇದು ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ದ್ರೋಹ, ಇದನ್ನು ನಾನು ಖಂಡಿಸುತ್ತೇನೆ ಎಂದರು.
ಸಿಎಂ ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ಕೇಂದ್ರದೊಂದಿಗೆ ಕೈ ಜೋಡಿಸದೆ ಘೋಷಣೆ ಮಾಡಿದ ಯೋಜನೆಗಳನ್ನು ಜಾರಿ ಮಾಡ್ಬೇಕೆಂದು ನಾನು ಒತ್ತಾಯ ಮಾಡುತ್ತೇನೆ. ಇಲ್ಲವಾದಲ್ಲಿ ಬಿಜೆಪಿ ವಿಧಾನಸಭೆ ಹಾಗು ವಿಧಾನಪರಿಷತ್ ಹೊರಗೆ ಒಳಗೆ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಮನೆಮನೆಗೆ ಹೋಗಿ ಸುಳ್ಳು ಭರವಸೆಗಳನ್ನು ಕೊಟ್ಟು ಇಷ್ಟೊಂದು ಸ್ಥಾನಗಳನ್ನು ಗೆದ್ದಿದೆ. ಇನ್ನು ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಈ ಕಾಂಗ್ರೆಸ್ ಯೋಜನೆಗಳನ್ನು ಇಂಪ್ಲಿಮೆಂಟ್ ಮಾಡಬೇಕು. ಆಗಲಿಲ್ಲ ಅಂದ್ರೆ ಅಧಿಕಾರದಿಂದ ತೊಲಗಬೇಕು ಎಂದು ಬಿಎಸ್ವೈ ಹರಿಹಾಯ್ದರು.
ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಲು, ಯಾವ ರೀತಿ ಹೋರಾಟ ಮಾಡಬೇಕೆಂಬುದನ್ನು ಶಾಸಕರು, ಪರಿಷತ್ ಸದಸ್ಯರು ಕೂತು ಚರ್ಚೆ ಮಾಡ್ತಾರೆ. ಗ್ಯಾರಂಟಿಗಳನ್ನು ಘೋಷಿಸುವ ಮೊದಲೇ ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಾಗಬಹುದು ಎಂದು ಅವರು ಯೋಚನೆ ಮಾಡ್ಬೇಕಾಗಿತ್ತು. ಸರ್ಕಾರ ಸುಳ್ಳು ಭರವಸೆಗಳನ್ನು ನೀಡಿದೆ ಎಂದು ರಾಜ್ಯದ ಜನ ಛೀಮಾರಿ ಹಾಕುತ್ತಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಸರ್ಕಾರದ ವಿರುದ್ಧ ಗುಡುಗಿದರು.
ಇದನ್ನೂ ಓದಿ: ವಿದ್ಯುತ್ ದರ ಹೆಚ್ಚಳ ಮಾಡಿದ್ದು ನಾವಲ್ಲ, ಬಿಜೆಪಿ ಸರ್ಕಾರ: ಸಚಿವ ಎಂಬಿ ಪಾಟೀಲ