ದಾವಣಗೆರೆ: ವಿವಾಹ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಪಿಡಿಒ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ನೊಂದ ಶಿಕ್ಷಕಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪಿಡಿಒ ಪರಮೇಶ್ವರಪ್ಪ ವಿರುದ್ಧ ಈ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ:
ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ನೊಂದ ಯುವತಿ ಹಾಗೂ ಪರಮೇಶ್ವರಪ್ಪ ಇಬ್ಬರೂ ದಾವಣಗೆರೆ ತಾಲೂಕಿನ ಶಾಮನೂರು ಗ್ರಾಮದವರು. ಮೊದಲು ಮೊಬೈಲ್ ಮೂಲಕ ಪರಿಚಯವಾದ ಇಬ್ಬರ ಗೆಳೆತನ ಪ್ರೀತಿಗೆ ತಿರುಗಿತ್ತು. ಇಬ್ಬರು ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗ್ತಿದೆ. ಈ ವೇಳೆ ಮದುವೆಯಾಗುವುದಾಗಿ ಪರಮೇಶ್ವರಪ್ಪ ನಂಬಿಸಿ ಹಲವು ಬಾರಿ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಆದ್ರೆ ಅನುಕಂಪದ ಆಧಾರದ ಮೇಲೆ ಪಿಡಿಒ ಉದ್ಯೋಗ ಸಿಕ್ಕ ಬಳಿಕ ತನಗೆ ಕೈಕೊಟ್ಟಿದ್ದಾನೆ ಎನ್ನುವುದು ಶಿಕ್ಷಕಿಯ ಆರೋಪವಾಗಿದೆ.
ಮದುವೆ ಬಗ್ಗೆ ಪ್ರಸ್ತಾಪಿಸಿದರೆ ತನಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಇದೀಗ ಪಿಡಿಒ ಪರಮೇಶ್ವರಪ್ಪನ ಮನೆಯಲ್ಲಿ ಆತನ ತಾಯಿ ಹಾಗೂ ಮನೆಯವರು ಬೇರೆ ಹುಡುಗಿಯೊಂದಿಗೆ ಮದುವೆ ಮಾಡಲು ಮುಂದಾಗಿದ್ದಾರೆ. ಇತ್ತೀಚೆಗೆ ಮದುವೆ ತಯಾರಿ ಜೋರಾಗಿ ನಡೆಯುತ್ತಿತ್ತು. ಹೀಗಾಗಿ ನಿತ್ಯ ನೂರಾರು ಮೆಸೇಜ್ಗಳನ್ನು ಮಾಡುತ್ತಿದ್ದ ಪರಮೇಶ್ವರಪ್ಪ ಈಗ ಬಂದ್ ಮಾಡಿದ್ದಾರೆ. ನಿನ್ನನ್ನು ನಾನು ಕೈ ಬಿಡುವುದಿಲ್ಲ. ಮೋಸವನ್ನೂ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರಂತೆ.
ಅವರ ಮನೆಯವರನ್ನ ಕೇಳಿದರೆ ನಾವು ಮೇಲ್ಜಾತಿ, ನೀವು ಕೆಳಜಾತಿಯವರು ಅಂತ ನಿಂದಿಸುತ್ತಾರೆ. ಕೇಳಿದರೆ ಜಾತಿ ನಿಂದನೆ ಮಾಡುತ್ತಿದ್ದಾರಂತೆ. ಹೀಗಾಗಿ, ಇದೀಗ ನ್ಯಾಯಕ್ಕಾಗಿ ಶಿಕ್ಷಕಿಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದಾವಣಗೆರೆ ಎಸ್ಪಿ ಹನುಮಂತರಾಯ ಅವರಿಗೂ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಡಿವೈಎಸ್ಪಿ ನಾಗೇಶ್ ಐತಾಳ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.