ದಾವಣಗೆರೆ : ವ್ಯಕ್ತಿಯೋರ್ವ ಸುಮಾರು 25 ವರ್ಷಗಳಿಂದ ಹೊರಗಿನ ಪ್ರಪಂಚ ನೋಡದೇ ಮನೆಯ ಕೋಣೆಯೊಂದರಲ್ಲಿ ಬಂಧಿಯಾಗಿರುವ ಘಟನೆ ದಾವಣಗೆರೆಯಲ್ಲಿ ಕಂಡ ಬಂದಿದೆ. ಆತನನ್ನು ನೋಡಿಕೊಳ್ಳುತ್ತಿದ್ದ ತಾಯಿಯೂ ಕೂಡ ಪಾರ್ಶ್ವವಾಯುವಿನ ಕಾರಣಕ್ಕೆ ಹಾಸಿಗೆ ಹಿಡಿದಿದ್ದಾರೆ. ತಂದೆಯೂ ಕೂಡ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಂಚಿನಗಾಳ್ ತಾಂಡಾದಲ್ಲಿ 44 ವರ್ಷದ ನಾಗರಾಜ ನಾಯ್ಕ ಎಂಬಾತ ಮಾನಸಿಕ ಅಸ್ವಸ್ಥತೆಯ ಕಾರಣಕ್ಕೆ ಕೋಣೆಯೊಂದರಲ್ಲಿ ಬಂಧಿಯಾಗಿದ್ದಾನೆ. ಹೇಮ್ಲಾ ನಾಯ್ಕ ಹಾಗೂ ಅಲಿಬಾಯಿ ದಂಪತಿಯ ಮಗನಾದ ಈತ ಕೋಣೆ ಸೇರಿ ಸುಮಾರು 25 ವರ್ಷಗಳಾಗಿವೆ.
ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ನಾಗರಾಜ
ತಾಂಡಾದಲ್ಲೇ ಹುಟ್ಟಿ ಬೆಳೆದ ನಾಗರಾಜ ಎಸ್ಎಸ್ಎಲ್ಸಿವರೆಗೂ ತಾಂಡಾದಲ್ಲೇ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಎನಿಸಿಕೊಂಡಿದ್ದ. ಆದರೆ, ಎಸ್ಎಸ್ಎಲ್ಸಿ ಪಾಸಾಗಿ ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರ್ಪಡೆಯಾಗಿದ್ದ ಈತನಿಗೆ ಬೇರಾವುದೋ ವಿಚಾರಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ.
ಕೆಲವು ದಿನಗಳಲ್ಲಿ ಮಾನಸಿಕ ಖಿನ್ನತೆ ಹೆಚ್ಚಾಗಿ, ಮನಸ್ಸಿನ ಮೇಲೆ ನಿಯಂತ್ರಣ ಕಳೆದುಕೊಂಡ ನಾಗರಾಜ, ಗ್ರಾಮಸ್ಥರನ್ನು ಕಂಡರೆ ಕಲ್ಲುಗಳಿಂದ ದಾಳಿ ಮಾಡಲು ಪ್ರಾರಂಭಿಸಿದ್ದನಂತೆ. ಇದಾದ ನಂತರ ಆತನ ಪೋಷಕರು ಹಲವೆಡೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿರಲಿಲ್ಲ. ಬೇರೆ ಬೇರೆ ಚಿಕಿತ್ಸೆ ಕೊಡಿಸಲು ಆರ್ಥಿಕ ಸಮಸ್ಯೆಯೂ ಅಡ್ಡಿಯಾಗಿತ್ತು. ಆದ್ದರಿಂದ ಆತನನ್ನು ಪೋಷಕರು ಗೃಹ ಬಂಧನದಲ್ಲಿ ಇರಿಸಿದ್ದಾರೆ.
ಬೆಂಗಳೂರಿಗೆ ಹೋದ ಮಗ ವಾಪಸ್ಸಾಗಿಲ್ಲ
ಈವರೆಗೂ ಆತನನ್ನು ನೋಡಿಕೊಳ್ಳುತ್ತಿದ್ದ ತಾಯಿ ಕೂಡ ಪಾರ್ಶ್ವವಾಯು ಪೀಡಿತೆಯಾಗಿ ಹಾಸಿಗೆ ಹಿಡಿದಿದ್ದಾರೆ. ಈಗ ತಂದೆ ಹೇಮ್ಲಾನಾಯ್ಕ ಮಗನನ್ನು ನೋಡಿಕೊಳ್ಳುವುದರ ಜೊತೆಗೆ ಪತ್ನಿಯನ್ನೂ ನೋಡಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಅಂದಹಾಗೆ ಹೇಮ್ಲಾನಾಯ್ಕ-ಅಲಿಬಾಯಿ ದಂಪತಿಗೆ ಒಟ್ಟು ಮೂವರು ಮಕ್ಕಳಿದ್ದು, ಮಗಳಿಗೆ ಮದುವೆ ಮಾಡಿದ್ದಾರೆ. ಇನ್ನೊಬ್ಬ ಮಗ ಬೆಂಗಳೂರು ಸೇರಿದ್ದು, ವಾಪಸ್ಸು ಬಂದಿಲ್ಲ.
ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದ ಈ ಕುಟುಂಬಕ್ಕೆ ಒಂದಾದ ಮೇಲೊಂದರಂತೆ ಸಮಸ್ಯೆಗಳು ಎದುರಾಗಿವೆ. ಸರ್ಕಾರ ಅವರ ನೆರವಿಗೆ ಬರಬೇಕೆಂದು ಕಂಚಿಗನಾಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಕ್ಕಳು ಮೊಬೈಲ್ ನೋಡಿ ಹಾಳಾಗ್ತಾರೆ ಅನ್ಬೇಡಿ.. ಈ ಬಾಲಕನ ಪಾಂಡಿತ್ಯ ನೋಡಿ!