ದಾವಣಗೆರೆ: ಪವನ್ ಒಡೆಯರ್ ಹಾಗೂ ಪುನೀತ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ನಟಸಾರ್ವಭೌಮ ಸಿನಿಮಾ ದಾವಣಗೆರೆಯಲ್ಲಿ ಭಾರೀ ಕ್ರೇಜ್ ಹುಟ್ಟಿಸಿದ್ದು, ಪುನೀತ್ ಕಟೌಟ್ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು.
12.45ಕ್ಕೆ ಮೊದಲ ಪ್ರದರ್ಶನ
ರಾತ್ರಿ 12:45 ಕ್ಕೆ ದಾವಣಗೆರೆಯ ಗೀತಾಂಜಲಿ ಹಾಗೂ ತ್ರಿನೇತ್ರ ಥಿಯೇಟರ್ನಲ್ಲಿ ನಟಸಾರ್ವಭೌಮ ಚಿತ್ರ ಬಿಡುಗಡೆಯಾಗಿದೆ. ಚಿತ್ರ ನೋಡಲು ಅಪ್ಪು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದು, ಕೆಲಕಾಲ ನೂಕುನುಗ್ಗಲು ಕಂಡು ಬಂತು. ಗೀತಾಂಜಲಿ ಥಿಯೇಟರ್ ಮುಂದೆ ಪವರ್ ಸ್ಟಾರ್ನ 30 ಅಡಿ ಕಟೌಟ್ ನಿರ್ಮಾಣ ಮಾಡಲಾಗಿದ್ದು, ಅಭಿಮಾನಿಗಳು ಕಟೌಟ್ಗೆ ಕುಂಕುಮ ಅಭಿಷೇಕ ನಡೆಸಿದರು. ಥಿಯೇಟರ್ ಒಳಗಿರುವ ಸಿನಿಮಾ ಕಟೌಟ್ಗೆ ಹಾಲಿನ ಅಭಿಷೇಕ ನಡೆಸಿದ ಅಭಿಮಾನಿಗಳು, ಹುಚ್ಚೆದ್ದು ಕುಣಿದರು.
ಹಾರರ್ ಟಚ್
ಪತ್ರಕರ್ತನ ಪಾತ್ರದಲ್ಲಿ ಮಿಂಚಿರುವ ಪುನೀತ್, ಒಂದೇ ಪಾತ್ರ ಮಾಡಿದ್ದರು ಸಹ ಎರಡು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪತ್ರಕರ್ತೆಯ ಕೊಲೆಯನ್ನು ಪತ್ತೆ ಹಚ್ಚಲು ಪತ್ರಕರ್ತೆಯ ಆತ್ಮ ನನ್ನ ಮೈ ಮೇಲೆ ಬಂದಿದೆ ಎಂದು ನಂಬಿಸಿ ಕೊಲೆಗಡುಕರನ್ನು ಶಿಕ್ಷಿಸುವುದೇ ಚಿತ್ರದ ಕಥಾ ಹಂದರ ಎಂದು ಹೇಳಲಾಗಿದೆ.