ದಾವಣಗೆರೆ : ಜಿಲ್ಲೆಯ ಒಟ್ಟು 7 ಮತಕ್ಷೇತ್ರಗಳ ಪೈಕಿ ಬಿಜೆಪಿ ಹೈಕಮಾಂಡ್ 3 ಕ್ಷೇತ್ರಗಳಿಗೆ ಟಿಕೆಟ್ ಪ್ರಕಟಿಸಿದೆ. ಜಗಳೂರು, ಹರಿಹರ, ಹೊನ್ನಾಳಿಯಲ್ಲಿ ಹಳಬರಿಗೆ ಟಿಕೆಟ್ ಸಿಕ್ಕಿದೆ. ಟಿಕೆಟ್ ಆಕಾಂಕ್ಷಿಗಳು ಬಂಡಾಯವೇಳದೆ ಟಿಕೆಟ್ ಘೋಷಿತ ಅಭ್ಯರ್ಥಿಗಳಿಗೆ ಬೆಂಬಲ ನೀಡುತ್ತಿದ್ದಾರೆ.
ಹರಿಹರ ಕ್ಷೇತ್ರದಿಂದ ಮಾಜಿ ಶಾಸಕ ಬಿ.ಪಿ.ಹರೀಶ್‌ಗೆ ಟಿಕೆಟ್ ದೊರೆತಿದ್ದು, ಹೊನ್ನಾಳಿಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸ್ಪರ್ಧಿಸಲಿದ್ದಾರೆ. ಜಗಳೂರು ಮತಕ್ಷೇತ್ತದಲ್ಲಿ ಹಾಲಿ ಶಾಸಕ ಎಸ್.ವಿ.ರಾಮಚಂದ್ರ ಅಖಾಡಕ್ಕಿಳಿಯುತ್ತಿದ್ದಾರೆ. ಉಳಿದ ನಾಲ್ಕು ಮತಕ್ಷೇತ್ರಗಳಾದ ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ ಹಾಗು ಮಾಯಕೊಂಡ, ಚನ್ನಗಿರಿ ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡದೇ ಗೌಪ್ಯತೆ ಕಾಪಾಡಿಕೊಳ್ಳಲಾಗಿದೆ. ಈ ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಬಿಜೆಪಿ ಮಣೆ ಹಾಕಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಹರಿಹರ, ಹೊನ್ನಾಳಿ, ಜಗಳೂರು ಈ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದರಿಂದ ಆಯಾ ನಾಯಕರ ಕಾರ್ಯಕರ್ತರಲ್ಲಿ ಸಂತಸ ಮನೆಮಾಡಿದೆ. ರೇಣುಕಾಚಾರ್ಯ, ರಾಮಚಂದ್ರ ಹಾಗು ಮಾಜಿ ಶಾಸಕ ಹರೀಶ್ ಹೈಕಮಾಂಡ್‌ಗೆ ಕೃತಜ್ಞನೆ ಸಲ್ಲಿಸಿದ್ದಾರೆ. ಬಿ.ಪಿ.ಹರೀಶ್ ಮಾತನಾಡಿ, "ಈಗಾಗಲೇ ಹರಿಹರ ಕ್ಷೇತ್ರದಿಂದ ಆರು ಸಲ ಸ್ಪರ್ಧೆ ಮಾಡಿದ್ದೇನೆ. ಇದು 7ನೇ ಚುನಾವಣೆ. ಈ ಸಲ ಟಿಕೆಟ್‌ಗಾಗಿ ಯಾವುದೇ ನಾಯಕರ ಹಿಂದೆ ಸುತ್ತಾಡಿಲ್ಲ. ಸರ್ವೇಯಲ್ಲಿ ನನ್ನ ಹೆಸರು ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ಟಿಕೆಟ್ ನೀಡಿದ್ದಾರೆ. ಗೆಲ್ಲುವ ವಿಶ್ವಾಸವಿದೆ. ಈಗಾಗಲೇ ಇಬ್ಬರು ಆಕಾಂಕ್ಷಿಗಳಾದ ಚಂದ್ರಶೇಖರ ಪೂಜಾರ್, ವೀರೇಶ್ ಹನಗವಾಡಿ ಜೊತೆ ಕ್ಷೇತ್ರದಲ್ಲಿ ಮನೆ ಮನೆ ಪ್ರಚಾರ ಮುಕ್ತಾಯವಾಗಿದೆ. ಮೂರು ಜನರಲ್ಲಿ ಯಾರಿಗೆ ಟಿಕೆಟ್ ಸಿಕ್ಕರೂ ಒಟ್ಟಾಗಿ ದುಡಿಯುವುದಾಗಿ ಪ್ರತಿಜ್ಞೆ ಮಾಡಿದ್ದೆವು. ಅದೇ ರೀತಿ ಪ್ರಚಾರ ಮಾಡಿ ಹರಿಹರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ," ಎಂದರು.
ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಬೆಂಬಲಿಗರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ರೇಣುಕಾಚಾರ್ಯ ಟೆಂಪಲ್ ರನ್ ಆರಂಭಿಸಿದ್ದಾರೆ. ಇದೇ 20ಕ್ಕೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಜಗಳೂರಿನ ಹಾಲಿ ಶಾಸಕ ಎಸ್.ವಿ.ರಾಮಚಂದ್ರ ಅವರಿಗೆ ಬಿಜೆಪಿ ಮಣೆಹಾಕಿದ ಬೆನ್ನಲ್ಲೇ ಅವರು ಧರ್ಮಸ್ಥಳಕ್ಕೆ ತೆರಳಿದ್ದಾರೆ. ಮಂಜುನಾಥನ ದರ್ಶನ ಪಡೆದು ಕ್ಷೇತ್ರಕ್ಕೆ ಹಿಂದಿರುಗಲಿದ್ದು, ಪ್ರಚಾರ ಆರಂಭಿಸಲಿದ್ದಾರೆ.
ಇದನ್ನೂ ಓದಿ : ಟಿಕೆಟ್ ಘೋಷಣೆಗೆ ಮುನ್ನವೇ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಂದ ಮತ ಪ್ರಚಾರ